ಜೊಯಿಡಾ: ರಾಜ್ಯದ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ. ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಕನ್ನಡ ಭಾಷೆಯ ಕುರಿತು ಅಭಿಮಾನ ಮೂಡಿಸುವ ರೀತಿಯಲ್ಲಿ ಸಾಂಸ್ಕೃತಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ನುಡಿದರು.
ಅವರು ಉಳವಿಯ ಚೆನ್ನಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಮಕರಂದ ಸ್ವರ ಸಂಗೀತ ಕಲಾ ಸಂಸ್ಥೆ ಹಾವೇರಿ ಸಹಭಾಗಿತ್ವದಲ್ಲಿ ಮಂಗಳವಾರ ಜರುಗಿದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಗಡಿ ಪ್ರದೇಶ ಉಳವಿಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಗಡಿ ಪ್ರದೇಶದ ಜನರ ಭಾವನೆಗಳಿಗೆ ಸ್ಪಂದಿಸಿ ಕನ್ನಡ ಜಾಗೃತಿ ಪ್ರಜ್ಞೆ ಅರಳಿಸುವ ಮೂಲಕ ಕನ್ನಡ ಶಾಲೆಗಳ ಸಶಕ್ತಿಕರಣದೊಂದಿಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ 2010ರಲ್ಲಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರಕ್ಕೆ ರಾಜ್ಯದ 63 ತಾಲೂಕುಗಳು ವ್ಯಾಪ್ತಿಯಲ್ಲಿ ಬರುತ್ತದೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ ಎಂದು ನುಡಿದರು.
ಹಿರಿಯ ಕವಿಗಳಾದ ಸತೀಶ ಕುಲಕರ್ಣಿ, ಕವಿ ಮಾಸ್ಕೇರಿ ಎಂ.ಕೆ.ನಾಯಕ, ಹಿರಿಯ ಪತ್ರಕರ್ತ ಎನ್.ಜಯಚಂದ್ರನ್, ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಲಾ ಮಿರಾಶಿ, ಕೆ.ವಿ.ಜಿ ಬ್ಯಾಂಕ್ ಮ್ಯಾನೇಜರ್ ದುರ್ಗೇಶ ದೊಡ್ಡಮನಿ, ಮುಖ್ಯ ಅರ್ಚಕ ಕಲ್ಮಠ ಶಾಸ್ತ್ರಿ, ಸಾಹಿತಿ ಸಿದ್ಧರಾಜ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪ್ರಾರಂಭದಲ್ಲಿ ಮಕರಂದ ಸ್ವರ ಸಂಗೀತಕಲಾ ಸಂಸ್ಥೆ ಅಧ್ಯಕ್ಷೆ ರಾಜೇಶ್ವರಿ ಆರ್.ಭಿಷ್ಠನಗೌಡರ ಸ್ವಾಗತಿಸಿದರು. ಕೊನೆಯಲ್ಲಿ ವಕೀಲರಾದ ಜಯಾ ಡಿ.ನಾಯ್ಕ ವಂದಿಸಿದರೆ, ಶ್ರೀನಿವಾಸ್ ವಿ.ರಾಘವ ಕಾರ್ಯಕ್ರಮ ನಿರೂಪಿಸಿದರು. ನಂತರ ಜರುಗಿದ ಸಾಂಸ್ಕೃತಿಕ ಸಂಭ್ರಮದಲ್ಲಿ ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ದಾಂಡೇಲಿ ಸುಸ್ವರ ಸಂಗೀತ ಸಂಸ್ಥೆಯ ಶಶಿಕಲಾ ಗೋಪಿ, ಶ್ರೀನಿವಾಸ್ ಕುಲಕರ್ಣಿ, ಶ್ರೀಧರ ಕುಲಕರ್ಣಿ, ನಾಗಾರ್ಜುನ, ನಂದಿನಿ ನಾಯ್ಕ, ರಾಜೇಶ್ವರಿ ಆರ್.ಭಿಷ್ಠನಗೌಡರ, ಜ್ಯೋತಿ ಹಿರೇಮಠ, ಮೇಘನಾ ಹಳಿಯಾಳ ಅವರಿಂದ ಭಾವ ಸಂಗೀತ ಕಾರ್ಯಕ್ರಮ ನಡೆಯಿತು.
ಸುಸ್ವರ ಸಂಗೀತ ವಿದ್ಯಾ ಸಂಸ್ಥೆಯ ದಾಂಡೇಲಿಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಸಮೂಹ ಗಾಯನ ನಂತರದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಜಿ.ಎಂ.ಓಂಕಾರಣ್ಣನವರ, ವಾಗೀಶ ಹೂಗಾರ, ಮಧುಮತಿ ಚಿಕ್ಕಗೌಡರ್, ಲತಾ ಮಂಜಪ್ಪ, ಅನುಪಮ ಡಿ.ಹಿರೇಮಠ, ರೇಣುಕಾ ಪಿ.ನರಗುಂದ ಭಾಗವಹಿಸಿದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಸತೀಶ ಕುಲಕರ್ಣಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ.ಸೋಮಶೇಖರ ದಂಪತಿಯನ್ನು, ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ಹಿರಿಯ ಪತ್ರಕರ್ತ ಎನ್.ಜಯಚಂದ್ರನ್ ದಂಪತಿಯನ್ನು, ಹಿರಿಯ ಕವಿಗಳಾದ ಸತೀಶ ಕುಲಕರ್ಣಿ, ಮಾಸ್ಕೇರಿ ಎಂ.ಕೆ.ನಾಯಕ, ಶಶಿಕಲಾ ಗೋಪಿ ಮತ್ತಿತರರನ್ನು ಸನ್ಮಾನಿಸಲಾಯಿತು.