ಶಿರಸಿ: ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬುಧವಾರ ಸಂಜೆ ಇನ್ನರ್ ವೀಲ್ ಕ್ಲಬ್ ನಿಂದ ನಡೆಯಿತು.
ಪತ್ರಕರ್ತೆ ಕೃಷ್ಣ ಶಿರೂರ್ ಮಾತನಾಡಿ, ಪ್ರತೀ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಸಮಯ ಮೀಸಲಿಡಬೇಕು. ಅದರಿಂದ ಅವರದ್ದಲ್ಲದೇ ಮನೆಯ ಸ್ವಾಸ್ಥ್ಯ ಕೂಡಾ ಉತ್ತಮವಾಗಿರಲಿದೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾವು ಪೊಸಿಟಿವ್ ಆಗಿ ಯೋಚಿಸಿದಾಗ ಎಲ್ಲವೂ ಸಾಧ್ಯ ಎಂದರು.
ಸನ್ಮಾನಿತರಾದ ನಿರ್ಮಲಾ ಹೆಗಡೆ ಮಾತನಾಡಿ, ರಾಜ, ಗುರು, ಸ್ತ್ರೀ ಈ ಮೂವರೂ ಸಮಾಜದಲ್ಲಿ ಉತ್ತಮರು ಅವರು ಆಳಲು ಬಲ್ಲರು, ಹಾಳು ಮಾಡಲೂ ಬಲ್ಲರು. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನುತ್ತಾರೆ ಆದರೆ ಇಂದು ಸಾಮಾನ್ಯವಾಗಿ ಪ್ರತೀ ಸಾಧಕಿ ಮಹಿಳೆಯ ಹಿಂದೆ ಪುರುಷ ಇದ್ದೇ ಇದ್ದಾನೆ. ಯಕ್ಷ ಗೆಜ್ಜೆಯ ಮೂಲಕ ಮಹಿಳೆಯರು ಹೆಚ್ಚಾಗಿ ಯಕ್ಷಗಾನದತ್ತ ಹೆಚ್ಚು ಆಸಕ್ತರಾಗುತ್ತಿರುವುದು ಸಂತಸ ಎಂದರು.
ಯಕ್ಷಗಾನ ಕಲಾವಿದೆ ಸುಮಾ ಹೆಗಡೆ ಗಡಿಗೆಹೊಳೆ ಮಾತನಾಡಿ, ಸನ್ಮಾನ ಪ್ರೋತ್ಸಾಹವೇ ನಮ್ಮ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸ್ಪೂರ್ತಿ ಸಿಗಲಿದೆ. ಗಂಡುಕಲೆಯನ್ನು ಮಕ್ಕಳು ಮಹಿಳೆಯರೂ ಸಹ ಸಮರ್ಥವಾಗಿ ಕಲಿತು ಪ್ರದರ್ಶಿಸುತ್ತಿರುವುದು ಇದು ಮಾನಸಿಕ ಮತ್ತು ದೈಹಿಕ ವ್ಯಾಯಾಮವನ್ನು ನೀಡಲಿದೆ ಎಂದರು.
ಭರತ ನಾಟ್ಯ ಕಲಾವಿದೆ ವಿ. ಸೀಮಾ ಭಾಗ್ವತ್, ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ, ಸುಮಾ ಹೆಗಡೆ, ಲೋಕಧ್ವನಿ ಸುದ್ದಿ ಸಂಪಾದಕಿ ವಿನುತಾ ಹೆಗಡೆ, ಡಾ. ತನುಶ್ರೀ, ಶಾರದಾ, ರೇಣುಕಾ, ಸ್ಮಿತಾರನ್ನು ಈ ಸಂದರ್ಭದಲ್ಲಿ ಸಾಧಕರೆಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಕ್ ಸೆಟ್ ಗಳನ್ನು ಇನ್ನರ್ ವೀಲ್ ನಿಂದ ಸರಕಾರಿ ಐದನೇ ನಂಬರ್ ಶಾಲೆಗೆ ವಿತರಿಸಲಾಯಿತು.
ವೇದಿಕೆಯ ಮೇಲೆ ಸೌಜನ್ಯ ತೇಲಂಗ್, ವಿದ್ಯಾ ನಾಯ್ಕ,, ಸುಧೀಂದ್ರ, ಪುಷ್ಪಲತಾ ಭಟ್, ಪೂರ್ಣಿಮಾ ಶೆಟ್ಟಿ ಇದ್ದರು.
ಇನ್ನರ್ವೀಲ್ ಅಧ್ಯಕ್ಷೆ ಮಾಧುರಿ ಶಿವರಾಮ್ ಸ್ವಾಗತಿಸಿದರು. ಸಿಂಧುಚಂದ್ರ ನಿರ್ವಹಿಸಿದರು. ರೇಖಾ ಭಟ್ ಪ್ರಾರ್ಥಿಸಿದರು.