ಶಿರಸಿ: ಸಾರ್ವಜನಿಕರು ಅಂತರ್ಜಾಲದಲ್ಲಿ ವ್ಯವಹಾರಗಳನ್ನು ನಡೆಸುವ ಸಾಕ್ಷರತೆಯನ್ನು ಪಡೆದುಕೊಳ್ಳಬೇಕು ಇಂದಿನ ದಿನಗಳಲ್ಲಿ ಇದು ಅನಿವಾರ್ಯ ವಾಗಿದೆ ಎಂದು ಕೆ. ಡಿ. ಸಿ. ಸಿ ಬ್ಯಾಂಕ್ ಅಧಿಕಾರಿ ಅರುಣ ಭಟ್ಟ ಬರೂರು ಹೇಳಿದರು.
ನಬಾರ್ಡ್ ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ ಹಾಗೂ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಹಯೋಗ ದೊಂದಿಗೆ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನ ದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಹಣಕಾಸು ಸಂಬಂಧಿಸಿದಂತೆ ಆರ್ಥಿಕ ಸಾಕ್ಷರತಾ ಕಾರ್ಯಕ್ರ ನಡೆಯಿತು. ಎ ಟಿ ಎಂ, ಡಿ.ಡಿ, ಚೆಕ್ ಬುಕ್, ಹಣ ವರ್ಗಾವಣೆ ಹಾಗೂ ಸದಸ್ಯರು ಆರ್ಥಿಕ ವ್ಯವಹಾರ ಗಳನ್ನು ಹೇಗೆ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕು ಎಂಬ ಬಗ್ಗೆ ಅವರು ಮಾಹಿತಿ ನೀಡಿದರು. ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಡುವ ತಪ್ಪುಗಳ ಬಗ್ಗೆ ತಿಳುವಳಿಕೆ ನೀಡಿದರು. ಎ ಟಿ ಎಂ ಕಾರ್ಡ ಗಳಿಗೆ ಸುರಕ್ಷತಾ ಸಂಖ್ಯೆಯಾಗಿ ಸರಳ ಸಂಖ್ಯೆಗಳನ್ನು ಬಳಸಬಾರದು, ಹಾಗೂ ಅದನ್ನು ಅವರ ಬಳಿಯಲ್ಲೇ ಇಟ್ಟುಕೊಳ್ಳದೆ ನೆನಪಿಟ್ಟು ಕೊಳ್ಳುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಸರಕಾರದಿಂದ ಇರುವ ವಿಮಾ ಸೌಲಭ್ಯ, ಅಫಘಾತ ವಿಮಾ ಸೌಲಭ್ಯ ಮತ್ತಿತರ ಅನುಕೂಲಕರ ಸೌಲಭ್ಯಗಳ ಕುರಿತಂತೆ ಮಾಹಿತಿ ನೀಡಿದರು.
ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದಲ್ಲಿ ಮೈಕ್ರೋ ಎ.ಟಿ.ಎಂ ಅನ್ನು ಈ ಸಂದರ್ಭದಲ್ಲಿ ಸಂಘದ ಆಧ್ಯಕ್ಷ ಎಂ. ಪಿ. ಹೆಗಡೆ ಕೊಟ್ಟೆಗದ್ದೆ ಉದ್ಘಾಟಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯರಾದ ಗುರುಪಾದ ಹೆಗಡೆ, ಪ್ರಸನ್ನ ಭಟ್ಟ, ಮಂಜುನಾಥ ನಾಯ್ಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಹೆಗಡೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಎಂ.ಆರ್. ಹೆಗಡೆ ಹೊನ್ನೇಕಟ್ಟಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.