ಶಿರಸಿ: ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಬೆಂಗಳೂರು, ಜಿಲ್ಲಾ ಕೌಶಲ್ಯ ಮಿಷನ್ ಉತ್ತರಕನ್ನಡ ಕಾರವಾರ, ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮತ್ತು ಎಂ.ಇ.ಎಸ್. ಖಾಸಗಿ ಐ.ಟಿ.ಐ. ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ, ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಶಿರಸಿಯಲ್ಲಿ “ಉದ್ಯೋಗ ಮೇಳ” ಮತ್ತು “ಶಿಶುಕ್ಷು ಮೇಳ” ನಡೆಯಿತು.
ಈ ಮೇಳದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಐ.ಟಿ.ಐ. ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪಾಸಾದ ಸುಮಾರು 200ಕ್ಕಿಂತ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, 25 ಕ್ಕಿಂತ ಹೆಚ್ಚಿನ ಕಂಪನಿಗಳು ಭಾಗವಹಿಸಿ, ಸುಮಾರು 75 ಕ್ಕಿಂತ ಹೆಚ್ಚಿನ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಮಾಡಿಕೊಂಡರು.
ಬೆಳಿಗ್ಗೆ 10:00 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ, ಎಂ.ಇ.ಎಸ್. ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಉದ್ಘಾಟಕರಾಗಿ ಆಗಮಿಸಿ, ದೀಪ ಬೆಳಗುವುದರ ಮೂಲಕ ಉದ್ಯೋಗ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ, ಇಂದಿನ ಯುವ ಸಮೂಹ ಉದ್ಯೋಗಕ್ಕಾಗಿ ಬೆಂಗಳೂರಿನಂತಹ ಕೆಲ ಸ್ಥಳಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದು, ಉದ್ಯೋಗಾವಕಾಶ ಎಲ್ಲೇ ಲಭ್ಯವಿದ್ದರೂ ಅಲ್ಲಿ ಕಾರ್ಯ ನಿರ್ವಹಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಶಿಕ್ಷಣವನ್ನು ಮುಗಿಸಿ,ಪ್ರಾರಂಭಿಕ ಹಂತದಲ್ಲಿ ಕೇವಲ ವೇತನವನ್ನು ಪರಿಗಣಿಸದೆ,ಅನುಭವ ಮತ್ತು ಕೌಶಲ್ಯವನ್ನು ಬೆಲೆಸಿಕೊಳ್ಳುವ ನಿಟ್ಟಿನಲ್ಲಿ ದೊರೆತ ಅವಕಾಶಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುವ ಪೃವೃತ್ತಿಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದರು ಮತ್ತು ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಾದ ಡಿ.ಟಿ. ನಾಯ್ಕ ಯುವ ಸಮೂಹಕ್ಕೆ ಉದ್ಯೋಗಾವಕಾಶ ಕಲ್ಪಿಸಲು ಮತ್ತು ಕೌಶಲ್ಯವನ್ನು ವೃದ್ಧಿಸಲು ಇಲಾಖೆಯಡಿಯಲ್ಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ಸಣ್ಣ ಕೈಗಾರಿಕೆಗಳ ಸಂಘ, ಉತ್ತರ ಕನ್ನಡ ಜಿಲ್ಲೆ ಇದರ ಅಧ್ಯಕ್ಷ ಎ.ಕೆ.ನಾಯ್ಕ, ಎಂ.ಇ.ಎಸ್. ಜಂಟಿ ಕಾರ್ಯದರ್ಶಿಗಳಾದ ಹರೀಶ ಪಂಡಿತ , ಸಿಂಹ ಶಕ್ತಿ ಒಕ್ಕೂಟ ಶಿರಸಿ ಇದರ ಸಿ.ಇ.ಓ. ಅಶೋಕ ಹೆಗಡೆ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬನವಾಸಿ ಇದರ ಪ್ರಾಚಾರ್ಯ ಮಂಜುನಾಥ ಹೆಗಡೆ ಉಪಸ್ಥಿತರಿದ್ದರು. ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಎನ್.ಕೆ.ಕಿಣಿ ಇವರು ಸ್ವಾಗತಿಸಿದರು. ಎಂ.ಇ.ಎಸ್. ಖಾಸಗಿ ಐ.ಟಿ.ಐ.ನ ಪ್ರಾಚಾರ್ಯ ಗಣೇಶ ಭಟ್ಟ ಇವರು ವಂದನಾರ್ಪಣೆ ಮಾಡಿದರು. ಐ.ಟಿ.ಐ. ಜೆ.ಟಿ.ಓ. ಶ್ರೀಮತಿ ಅಕ್ಷತಾ ನಾಯ್ಕ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.