ಯಲ್ಲಾಪುರ: ತಮ್ಮ ಸಂಬಂಧಿಕರ ಮೃತ ದೇಹವನ್ನು ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನ ಪೂರೈಸಿ ದಹಿಸಿದ ನಂತರ ಸುಟ್ಟ ಬೂದಿಯನ್ನು ತೆಗೆದು ಸ್ಮಶಾನವನ್ನು ಸ್ವಚ್ಛವಾಗಿ ಇರುವಂತೆ ಮೃತರ ಸಂಬಂಧಿಗಳು ನೋಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸತೀಶ ನಾಯ್ಕ ಹೇಳಿದ್ದಾರೆ.
ವೃದ್ಧಾಶ್ರಮದಲ್ಲಿ ವಯಸಹಜ ಖಾಯಿಲೆಯಿಂದ ಮೃತಪಟ್ಟ ಅನಾಥ ವ್ಯಕ್ತಿಯೊಬ್ಬರ ಮೃತ ದೇಹವನ್ನು ಶುಕ್ರವಾರ ಅಂತ್ಯಕ್ರಿಯಕ್ಕೆ ತೆಗೆದುಕೊಂಡು ಸ್ಮಶಾನಕ್ಕೆ ಹೋದಾಗ ಅಲ್ಲಿ ಕಂಡುಬಂದ ದೃಶ್ಯದ ಕುರಿತು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಅನಾಥರು, ಪರಿಚಯಸ್ಥರು, ಸಂಬಂಧಿಕರ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಬಂದಾಗ ಪ್ರತಿ ಬಾರಿಯೂ ಇಲ್ಲಿ ಬೂದಿಗಳ ರಾಶಿ ರಾಶಿ ಬಿದ್ದಿರುತ್ತದೆ. ತಮ್ಮನ್ನು ಅಗಲಿದ ಸಂಬಂಧಿಕರ ಬಗ್ಗೆ ಕಾಳಜಿ ವಹಿಸುವ ಕುಟುಂಬಸ್ಥರು ಅವರನ್ನು ಅಂತ್ಯಕ್ರಿಯೆ ಮಾಡಿದ ಸ್ಮಶಾನವನ್ನು ಸ್ವಚ್ಛಗೊಳಿಸುವ ಬಗ್ಗೆ ನಿರ್ಲಕ್ಷಿಸುತ್ತಿದ್ದಾರೆ. ನಂತರ ಶವ ಸಂಸ್ಕಾರಕ್ಕೆ ಬರುವ ಕೆಲವು ಜನ ಬೇರೆಯವರ ಬೂದಿಯನ್ನು ತೆಗೆದು ಸ್ವಚ್ಛ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಈ ಬೂದಿ ತೆಗೆಯುವ ಸಂದರ್ಭದಲ್ಲಿ ಮೃತರು ಹಾಗೂ ಅವರ ಕುಟುಂಬಸ್ಥರಿಗೆ ಶಾಪ ಹಾಕುತ್ತಲೇ ಬೂದಿ ತೆಗೆಯುತ್ತಿರುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಸತ್ತವರ ಆತ್ಮ ಶಾಂತವಾಗಿ ಇರಬೇಕು. ಆ ರೀತಿಯಲ್ಲಿ ಕುಟುಂಬಸ್ಥರು ಶವವನ್ನು ಧಹಿಸಿದ ಒಂದು ಅಥವಾ ಎರಡು ದಿನದಲ್ಲಿ ಬೂದಿ ತೆಗೆದು ಸ್ಮಶಾನವನ್ನು ಸ್ವಚ್ಛವಾಗಿ ಇಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಪಟ್ಟಣದ ಬಿಸಗೋಡ್ ಕ್ರಾಸ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಪತ್ರಿಕಾ ಸಂಘಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಆಗಾಗ ಸ್ವಚ್ಛ ಮಾಡುತ್ತಿರುತ್ತವೆ. ಆದರೂ ಬಹಳಷ್ಟು ಜನರಿಗೆ ಸ್ವಚ್ಛತೆಯ ಬಗ್ಗೆ ಇದುವರೆಗೆ ಜಾಗೃತಿ ಮೂಡಿಲ್ಲ. ಸ್ಮಶಾನದಲ್ಲಿ ಭಯಾನಕವಾದ ವಾತಾವರಣ ಸೃಷ್ಟಿಸಿ ತಮ್ಮವರ ಅಂತ್ಯ ಸಂಸ್ಕಾರ ಮುಗಿಸಿ ಹೋಗುವುದು ಬಿಟ್ಟರೆ, ಸಾಮಾಜಿಕ ಕಳಕಳಿ ಇದ್ದಂತೆ ತೋರುತ್ತಿಲ್ಲ. ಈಗಲಾದರೂ ಶವ ಸಂಸ್ಕಾರಕ್ಕೆ ತೆರಳಿದವರು, ಸಂಸ್ಕಾರದ ಒಂದೆರಡು ದಿನಗಳ ನಂತರ ಬೂದಿ ತೆಗೆದು, ತಮ್ಮಿಂದಾದ ಕಸ ಕಡ್ಡಿಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕಾಗಿದೆ.