ಸಿದ್ದಾಪುರ: ಪಟ್ಟಣದ ಸಿದ್ದಿವಿನಾಯಕ ವಿದ್ಯಾ ಸಮುಚ್ಛಯದಲ್ಲಿ ಗಣೇಶ ಹೆಗಡೆ ದೊಡ್ಮನೆ ಜನ್ಮಶತಮಾನೋತ್ಸವದ ಶತಸ್ಮೃತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಶಿಭೂಷಣ ಹೆಗಡೆ ದೊಡ್ಮನೆ ಬಿಜೆಪಿ ಸೇರ್ಪಡೆಯಾಗುವ ಸುಳಿವು ನೀಡಿದರು. ಅವರುಗಳು ತಮ್ಮ ಮಾತಿನಲ್ಲಿ ಈ ಬಗ್ಗೆ ಪರೋಕ್ಷವಾಗಿ ಅಭಿಪ್ರಾಯ ಹಂಚಿಕೊಂಡರು.
ಸೂರ್ಯವರ್ಚಸ್ವಿ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೊಡ್ಮನೆ ಕುಟುಂಬದೊಂದಿಗಿನ ಸಂಬಂಧವನ್ನು ನೆನಪಿಸಿಕೊಂಡರು. ಶಶಿಭೂಷಣ ಅವರ ಕ್ರೀಯಾಶೀಲತೆ ಹಾಗೂ ಕಾರ್ಯಕ್ಷಮತೆ ಉತ್ತಮವಾಗಿದೆ.ಅದು ಎಲ್ಲೆಲ್ಲಿಯೋ ಏನೆನೋ ಆಗುವುದು ಬೇಡ. ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ಆಗಬೇಕು. ನಾವೆಲ್ಲರೂ ಮೊದಲಿನಿಂದ ಜೊತೆಯಾಗಿದ್ದವರು.ಮುಂದೆ ಎಲ್ಲಾ ಜೊತೆಯಾಗಿ ಒಟ್ಟಿಗೆ ಸಾಗೋಣ ಎಂದು ಹೇಳಿದ್ದೇನೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುವಾಗ ಶಶಿಭೂಷಣ ಅವರು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲು ನಾನು ಶಶಿ ಎಲ್ಲರೂ ಒಂದೆ ಕಡೆ ಇದ್ದವರು. ಮುಂದೆ ಒಂದೆ ಕಡೆ ಇರೋಣ ಎನ್ನುವುದನ್ನು ಹೇಳಿದ್ದೇನೆ. ಆ ಬಗ್ಗೆ ಮಾತನಾಡಿದ್ದೇನೆ ಎಂದರು. ಈ ನಾಯಕರುಗಳ ಮಾತು ವೇದಿಕೆಯ ಎದುರಿನಲ್ಲಿದ್ದವರಿಗೆ ಶೀಘ್ರದಲ್ಲಿ ಶಶಿಭೂಷಣ ಹೆಗಡೆ ದೊಡ್ಮನೆ ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಒಂದು ಸೂಚನೆಯನ್ನು ನೀಡಿದಂತೆ ಇತ್ತು. ವೇದಿಕೆಯಲ್ಲಿದ್ದ ಇವರ ಆಪ್ತರಾಗಿದ್ದ ಸಚಿವರಾದ ಗೋವಿಂದ ಕಾರಜೋಳ, ಸಭಾಪತಿ ಬಸವರಾಜ ಹೊರಟ್ಟಿ, ಪ್ರಮೋದ ಹೆಗಡೆ, ಕೆ.ಜಿ.ನಾಯ್ಕ ಎಲ್ಲರೂ ಬಿಜೆಪಿಗರೆ ಆಗಿದ್ದಾರೆ. ಅಲ್ಲದೆ ಶಶಿಭೂಷಣ ಅವರು ಹಾಲಿ ಇರುವ ಜೆಡಿಎಸ್ ಪಕ್ಷದ ಯಾವ ನಾಯಕರು ಕಾರ್ಯಕ್ರಮದ ಪಟ್ಟಿಯಲ್ಲಿ ಇರಲಿಲ್ಲ ಎನ್ನುವುದು ಈ ಸಂಗತಿಯ ಗಮನ ಸೇಳೆಯುವಂತೆ ಇತ್ತು.