ಯಲ್ಲಾಪುರ: ಮನುಷ್ಯನ ಜೀವನ ಅನಿಶ್ಚಿತ, ಇರುವಷ್ಟು ದಿನ ಒಳ್ಳೆಯ ಕೆಲಸವನ್ನು ಮಾಡಿ ಸಮಾಜದಲ್ಲಿ ಗೌರವವನ್ನು ಪಡೆಯಬೇಕು. ಇಂತಹ ದಾರಿಯಲ್ಲಿ ನಡೆದುಬಂದ ದಿವಂಗತ ಬಿ.ಜಿ.ಹೆಗಡೆ ಗೇರಾಳ ಒಬ್ಬ ಸಜ್ಜನ, ಆದರ್ಶಪ್ರಾಯ ವ್ಯಕ್ತಿಯಾಗಿದ್ದರು ಎಂದು ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಆನಗೊಡಿನಲ್ಲಿ ದಿ.ಬಿ.ಜಿ.ಹೆಗಡೆ ಗೇರಾಳ ಸ್ಮರಣಾರ್ಥ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬದುಕಿನಲ್ಲಿ ಎಷ್ಟು ಹೊತ್ತಿಗೆ ಏನಾಗಬಲ್ಲದು ಎನ್ನುವುದು ಯಾರಿಗೂ ಗೊತ್ತಿಲ್ಲದ ಸಂಗತಿ. ನಮಗೆ ಎಷ್ಟು ಕಾಲ ಈ ಭೂಮಿಯ ಋಣ ಇರುತ್ತೋ ಅಷ್ಟು ಸಮಯ ನಮಗೆ. ಈ ಸಮಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸರಿ ದಾರಿಯಲ್ಲಿ ನಡೆದು ಒಂದಿಷ್ಟು ಸಾರ್ಥಕ ಬದುಕು ಕಟ್ಟಿಕೊಳ್ಳಲು ಬಯಸುವುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಎಂದರು.
ಶಿರಸಿಯ ಎಂ.ಇ.ಎಸ್ ಪ್ರಾಂಶುಪಾಲರಾದ ಟಿ.ಎಸ್.ಹಳೆಮನೆ ಮಾತನಾಡಿ, ನಾನೇನೂ ಅಂತ ಸಾಧಕ ಅನ್ನುವಂತಿಲ್ಲ. ನನ್ನ ಕರ್ತವ್ಯವನ್ನು ಸಮರ್ಥವಾಗಿ ಮಾಡುವ ಪ್ರಯತ್ನ ಮಾಡಿದ್ದೇನೆ. ಇದನ್ನು ಗುರುತಿಸಿದ ಸಮಾಜಕ್ಕೂ, ತಮಗೂ ಋಣಿ ಆಗಿದ್ದೇನೆ. ತಾವು ನನಗೆ ನೀಡಿದ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ ಎಂದರು.
ಯಲ್ಲಾಪುರ ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾದ ಎನ್ ಕೆ ಭಟ್ ಅಗ್ಗಾಶಿಕುಂಬ್ರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾರಂಭದಲ್ಲಿ ಸಿ.ಜಿ.ಹೆಗಡೆ ಸ್ವಾಗತಿಸಿದರೆ, ಸಂಘಟಕರಾದ ಮುಖ್ಯಸ್ಥರಾದ ಎನ್.ಕೆ.ಭಟ್ ಮೆಣಸುಪಾಲ ಪ್ರಾಸ್ತಾವಿಕ ಮಾತನಾಡಿದರು. ಸತೀಶ ಯಲ್ಲಾಪುರ ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ವಿಮಲಾ ಭಟ್ಟ ದಿವಾಕರಮನೆ ಇವರನ್ನೂ ಸನ್ಮಾನಿಸಲಾಯಿತು. ಕೊನೆಯಲ್ಲಿ ಕೆ. ಟಿ. ಹೆಗಡೆ ವಂದಿಸಿದರು. ಸಣ್ಣಪ್ಪ ಭಾಗ್ವತ ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಯಲ್ಲಾಪುರದ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಉಪಸ್ಥಿತರಿದ್ದರು.