ಕಾರವಾರ: ಅತಂತ್ರವಾಗಿದ್ದ ಕಾರವಾರ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಇರುವ ನಾಲ್ವರು ಸದಸ್ಯರಲ್ಲಿ ಈವರೆಗೆ ಯಾರಿಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ, ಈ ಬಾರಿಯಾದರು ಕೊಡುವಂತಾಗಲಿ ಎನ್ನುವ ಆಗ್ರಹವನ್ನು ಕೆಲ ಜೆಡಿಎಸ್ ಸದಸ್ಯರು ಮಾಡುತ್ತಿದ್ದಾರೆ.
ಕಾರವಾರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 4, ಹಾಗೂ 5 ಕ್ಷೇತ್ರದಲ್ಲಿ ಪಕ್ಷೇತರರು ಆಯ್ಕೆಯಾಗಿದ್ದರು. 31 ಸದಸ್ಯ ಬಲದ ನಗರಸಭೆಯಲ್ಲಿ 16 ಸ್ಥಾನ ಪಡೆದವರು ಅಧಿಕಾರ ಹಿಡಿಯುವುದರಿಂದ ಯಾವ ಪಕ್ಷವೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಇನ್ನು ಜೆಡಿಎಸ್ ಪಕ್ಷದ ನಾಲ್ಕು ಸದಸ್ಯರ ಬೆಂಬಲ ನಿರ್ಣಾಯಕವಾಗಿತ್ತು. ಜೆಡಿಎಸ್ ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪ್ರಯತ್ನ ನಡೆಸಿತ್ತು. ಅಂತಿಮವಾಗಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ತಮ್ಮ ಪಕ್ಷದ ನಾಲ್ಕು ಸದಸ್ಯರು ಹಾಗೂ ತನ್ನ ಬೆಂಬಲಿತ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲವನ್ನ ಬಿಜೆಪಿಗೆ ಘೋಷಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದು ನಿತೀನ್ ಪಿಕಳೆ ಅಧ್ಯಕ್ಷ ಹುದ್ದೆಗೆ ಏರಿದ್ದರು.
ಜೆಡಿಎಸ್ ಬೆಂಬಲ ಪಡೆದಿದ್ದರಿಂದ ಜೆಡಿಎಸ್ ಪಕ್ಷದ ನಾಲ್ವರು ಸದಸ್ಯರಲ್ಲಿ ಯಾರಿಗಾದರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನ ಕೊಡಲಾಗುವುದು ಎನ್ನಲಾಗಿತ್ತು. ಮೊದಲ ಹಂತದಲ್ಲಿ ಪಕ್ಷೇತರ ಸದಸ್ಯರಾದ ಸಂಧ್ಯಾ ಬಾಡ್ಕರ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರು. ಇನ್ನು ಎರಡನೇ ಅವಧಿಯಲ್ಲಿ ಪಕ್ಷೇತರ ಸದಸ್ಯೆ ಸುಜಾತಾ ಥಾಮ್ಸೆ ಅಧ್ಯಕ್ಷ ಸ್ಥಾನಕ್ಕೆ ಏರಿದ್ದರು. ಸದ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಜೆಡಿಎಸ್ ಪಕ್ಷದ ಸದಸ್ಯರು ತಮಗೆ ಈ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿಜೆಪಿಯ ಎಲ್ಲಾ ಕಾರ್ಯಕ್ರಮದಲ್ಲೂ ಜೆಡಿಎಸ್ ಸದಸ್ಯರು ಬೆಂಬಲ ನೀಡುತ್ತಿದ್ದು ಅಧಿಕಾರದಲ್ಲಿರುವ ಬಿಜೆಪಿ ನಾಯಕರು ತಮಗೆ ಸ್ಥಾಯಿ ಸಮಿತಿಯಲ್ಲಿ ಅವಕಾಶ ಕೊಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರ ಬಳಿ ಸಹ ವಿಷಯ ತಿಳಿಸಿದ್ದು, ನಗರಸಭೆ ಗದ್ದುಗೆ ಏರಲು ಬಿಜೆಪಿ ತಾವು ಬೆಂಬಲ ನೀಡಿದ್ದೇವೆ. ಆದರೆ ಅದಕ್ಕೆ ಪ್ರತಿಯಾಗಿ ಸ್ಥಾಯಿ ಸಮಿತಿಯಲ್ಲಿ ಅವಕಾಶ ಮಾಡಿಕೊಡಬೇಕಂತೆ ಮನವಿಯನ್ನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಶಾಸಕಿ ರೂಪಾಲಿ ನಾಯ್ಕರಿಗೂ ಈ ಬಾರಿ ತಮಗೆ ಅವಕಾಶ ಕಲ್ಪಿಸುವಂತೆ ಒತ್ತಾಯ ಹಾಕಿದ್ದು ಬಿಜೆಪಿ ಸದಸ್ಯರು ಶಾಸಕರು ಯಾವ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.