ದಾಂಡೇಲಿ: ನಗರದ ಡಿ.ಎಫ್.ಎ ಮೈದಾನದಲ್ಲಿ ಕಳೆದ ಐದು ದಿನಗಳಿಂದ ವೈಭವಯುತವಾಗಿ ನಡೆಯುತ್ತಿದ್ದ ಡಿಪಿಲ್ ಕ್ರಿಕೆಟ್ ಜಾತ್ರೆ ಸಂಭ್ರಮ, ಸಡಗರದಿಂದ ಸಂಪನ್ನಗೊಂಡಿದೆ.
ಎಂಟು ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಹಂತಕ್ಕೆ ಸ್ಟಾರ್ಲಿಂಗ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವನ್ ತಂಡ ಪ್ರವೇಶ ಪಡೆದಿತ್ತು. ಅಂತಿಮ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಟಾರ್ಲಿಂಗ್ ರಾಯಲ್ಸ್ ತಂಡ 5 ವಿಕೆಟ್ ನಷ್ಟಕ್ಕೆ 94 ರನ್ ಗುರಿಯನ್ನು ನೀಡಿತ್ತು. ಇದಕ್ಕೆ ಎದುರುತ್ತರ ನೀಡುವಲ್ಲಿ ಕಿಂಗ್ಸ್ ಇಲೆವನ್ ಮೊದಲ ಓವರಿನಲ್ಲೆ ಮುಗ್ಗರಿಸಿ, ಕೊನೆಗೆ 10 ಓವರ್ಗಳಿಗೆ 9 ವಿಕೆಟ್ಗಳನ್ನು ಕಳೆದುಕೊಂಡು 73 ರನ್ ಗಳನ್ನಷ್ಟೆ ಕೂಡಿಸಲು ಶಕ್ತವಾಗಿ ರನ್ನರ್ಸ್ ಬಹುಮಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸೋಲು-ಗೆಲುವಿನ ನಡುವೆಯು ಪರಸ್ಪರ ಸಾಮರಸ್ಯ ಮತ್ತು ಸೌಹಾರ್ಧತೆಯಿಂದ ಎರಡು ತಂಡಗಳ ಆಟಗಾರರು ಮತ್ತು ಮಾಲಕರು ಕ್ರಿಕಟ್ ಆಟದ ಸವಿಯನ್ನು ಉಣಬಡಿಸಿದ್ದು ವಿಶೇಷವಾಗಿತ್ತು.
ಪ್ರಥಮ ಬಹುಮಾನ ನಗದು 1,11,111 ರೂ. ಮತ್ತು ಶಾಶ್ವತ ಫಲಕವನ್ನು ಸ್ಟಾರ್ಲಿಂಗ್ ರಾಯಲ್ಸ್ ತನ್ನದಾಗಿಸಿಕೊಂಡರೇ, 55,555 ರೂ ನಗದು ಹಾಗೂ ಶಾಶ್ವತ ಫಲಕದೊಂದಿಗೆ ದ್ವಿತೀಯ ಸ್ಥಾನವನ್ನು ಕಿಂಗ್ಸ್ ಇಲೆವನ್ ಪಡೆದುಕೊಂಡಿತು. ಪಂದ್ಯ ಪುರುಷೋತ್ತಮ ಮತ್ತು ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಸ್ಟಾಲಿಂಗ್ ರಾಯಲ್ಸ್ ತಂಡದ ವಿನಿತ್ ಅವರು ತನ್ನದಾಗಿಸಿಕೊಂಡರು. ಸರಣಿ ಶ್ರೇಷ್ಟ ಮತ್ತು ಅತ್ಯುತ್ತಮ ಬ್ಯಾಟ್ಸ್ಮೆನ್ ಗೌರವಕ್ಕೆ ಕಿಂಗ್ಸ್ ಇಲೆವನ್ ತಂಡದ ಅಖಿಲ್ ಗಂಗೊಳ್ಳಿಯವರು ಪಾತ್ರರಾದರು. ಅತ್ಯುತ್ತಮ ಕ್ಷೇತ್ರರಕ್ಷಕ ಬಹುಮಾನ ದಾಂಡೇಲಿ ಜಂಗಲ್ ವಿಲ್ಲಾ ವಾರಿರ್ಸ್ ತಂಡದ ಸರ್ವೇಶ್ ಅವರ ಪಾಲಾಯಿತು. ಭರವಸೆಯ ಆಟಗಾರರಾಗಿ ಸ್ಟಾರ್ಲಿಂಗ್ ರಾಯಲ್ಸ್ ತಂಡದ ವಿಜಯ್ ನಾಕಾಡೆಯವರು ಬಹುಮಾನ ಪಡೆದುಕೊಂಡರು. ಕೂಟದಲ್ಲಿ ಅತ್ಯುತ್ತಮ ಶಿಸ್ತಿನ ತಂಡವಾಗಿ ಕಾಳಿ ಟೈರ್ಸ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿ, ಬಹುಮಾನ ವಿತರಿಸಿ ಮಾತನಾಡಿದ ಖ್ಯಾತ ಕ್ರಿಕೆಟಿಗ ನಿತಿನ್ ಬಿಲ್ಲೆಯವರು ದಾಂಡೇಲಿಯಂತ ನಗರದಲ್ಲಿ ಅತ್ಯದ್ಭುತ ಪಂದ್ಯಾವಳಿಯನ್ನು ಆಯೋಜಿಸಿದ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಕಾರ್ಯ ಅಭಿನಂದನೀಯ ಮತ್ತು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಲೆದರ್ ಬಾಲ್ ಪಂದ್ಯಾವಳಿಯನ್ನು ನಡೆಸುವ ನಿಟ್ಟಿನಲ್ಲಿ ಮತ್ತು ಅದಕ್ಕೆ ತಕ್ಕುದಾಗಿ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಸಂಘಟನೆ ಶ್ರಮಿಸುವಂತಾಗಲೆಂದು ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಸಿಪಿಐ ಬಿ.ಎಸ್.ಲೋಕಾಪುರ ಅವರು ಶಿಸ್ತುಬದ್ಧವಾಗಿ ಪಂದ್ಯಾವಳಿಯ ಆಯೋಜನೆಯಾಗಿರುವುದು ಅತ್ಯಂತ ಸಂತಸ ಸಂಗತಿ. ಈ ಪಂದ್ಯಾವಳಿ ದಾಂಡೇಲಿಯ ಕ್ರಿಕೆಟ್ ಪ್ರತಿಭೆಗಳಿಗೆ ಸ್ಫೂರ್ತಿಯಾಗಬೇಕೆಂದರು. ಡಿಪಿಎಲ್ ಪಂದ್ಯಾವಳಿಯ ಚೇರ್ಮೆನ್ ಅನಿಲ್ ಪಾಟ್ನೇಕರ್ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಸರ್ವರ ಸಹಕಾರದಿಂದ ಡಿಪಿಎಲ್ ಪ್ರೀಮಿಯರ್ ಲೀಗ್ ಗೆದ್ದಿದೆ. ಸರ್ವರ ಸಹಕಾರಕ್ಕೆ ಸದಾ ಋಣಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕ್ರಿಕೆಟಿಗ ನಿತಿನ್ ಬಿಲ್ಲೆಯವರನ್ನು ಸನ್ಮಾನಿಸಲಾಯ್ತು. ಪಂದ್ಯಾವಳಿಗೆ ಸಹಕರಿಸಿದ ಹಾಗೂ ಶ್ರಮಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್, ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಅನಿಲ್ ನಾಯ್ಕರ್, ಸದಸ್ಯರಾದ ದಶರಥ ಬಂಡಿವಡ್ಡರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರಮೇಶ್ ನಾಯ್ಕ, ಪಿಎಸೈ ಐ.ಆರ್.ಗಡ್ಡೇಕರ್, ಹಿರಿಯ ಪತ್ರಕರ್ತ ಯು.ಎಸ್.ಪಾಟೀಲ್ ಮೊದಲಾದವರು ಪಾಲ್ಗೊಂಡಿದ್ದರು.