ಪಣಜಿ: ಅರಣ್ಯ ಮತ್ತು ವನ್ಯಜೀವಿ ಅನುಮತಿ ಸಿಗದ ಕಾರಣ ಎರಡು ಅಣೆಕಟ್ಟುಗಳನ್ನು ಕಟ್ಟುವ ಮೂಲಕ ಮಹದಾಯಿ ನದಿ ನೀರನ್ನು ತಿರುಗಿಸುವ ಕರ್ನಾಟಕದ ಉದ್ದೇಶವು ಈಡೇರುವುದಿಲ್ಲ ಎಂದು ಗೋವಾ ಸಚಿವ ಸುಭಾಷ್ ಶಿರೋಡ್ಕರ್ ಹೇಳಿದರು.
ಕರ್ನಾಟಕ ನದಿ ನೀರು ತಿರುಗಿಸುವುದರಿಂದ ಮಹದಾಯಿ ಅಭಯಾರಣ್ಯಕ್ಕೆ ತೊಂದರೆ ಆಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕರ್ನಾಟಕಕ್ಕೆ ಈಗಾಗಲೇ ಗೋವಾ ಸರ್ಕಾರ ನೋಟಿಸ್ ನೀಡಿದೆ. ಈ ತಡೆಯನ್ನು ನಿವಾರಿಸಿಕೊಂಡು ಮುಂದುವರೆಯಲು ಕರ್ನಾಟಕಕ್ಕೆ ಸಾಧ್ಯವಿಲ್ಲ. ಅರಣ್ಯ ಮತ್ತು ವನ್ಯಜೀವಿ ಅನುಮತಿ ಸಿಗದ ಕಾರಣ ಈ ಯೋಜನೆ ರದ್ದಾಗುತ್ತದೆ. ನದಿ ನೀರನ್ನು ತಿರುಗಿಸಲು ಕೇಂದ್ರ ಜಲಶಕ್ತಿ ಸಚಿವಾಲಯ ಅನುಮತಿ ನೀಡುವುದಿಲ್ಲ ಎಂದು ಅವರು ಹೇಳಿದರು.
ಅಣೆಕಟ್ಟುಗಳನ್ನು ನಿರ್ಮಿಸಲು ಕರ್ನಾಟಕದ ಸಮಗ್ರ ಯೋಜನಾ ವರದಿಗೆ ಕೇಂದ್ರ ಸರ್ಕಾರ ನೀಡಿರುವ ಅನುಮತಿಯು ಕೇವಲ ಆರಂಭಿಕ ಹಂತವಷ್ಟೇ. ಇದು ಮೊದಲ ಹೆಜ್ಜೆ. ಈ ಯೋಜನೆ ನಿಟ್ಟಿನಲ್ಲಿ ಕರ್ನಾಟಕ ಇನ್ನೂ 100 ಹೆಜ್ಜೆಗಳನ್ನು ಕ್ರಮಿಸಬೇಕು. ಈ ವಿವಾದವು 22 ವರ್ಷಗಳಿಂದ ನಡೆಯುತ್ತಿದೆ. ಮಹದಾಯಿ ನೀರು ತಿರುಗಿಸುವ ಕರ್ನಾಟಕದ ಯೋಜನೆ ಸಫಲವಾಗುವುದಿಲ್ಲ ಎಂದರು. ಸದ್ಯ ಈ ಮೊಕದ್ದಮೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ. ಗೋವಾಕ್ಕೆ ಜಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ಸುಭಾಷ್ ಅವರು ಹೇಳಿದರು.