ನವದೆಹಲಿ: ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿರುವ ಡಾ.ವಿರೇಂದ್ರ ಹೆಗ್ಗಡೆ ರಾಜ್ಯಸಭೆ ಕಲಾಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಮೇಲೆ ಭಾಷಣ ಮಾಡಿದರು.
ಬಸವಣ್ಣನವರ ಕಾಯಕವೇ ಕೈಲಾಸದಡಿ ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಪಾಶ್ಚಾತ್ಯ ಸಂಸ್ಕೃತಿ ಭಾರತ ಮೇಲೆ ಪ್ರಭಾವ ಬೀರಿದೆ. ಅದೇ ರೀತಿ ಭಾರತದ ಆರ್ಯವೇದ, ಯೋಗ ಪಾಶ್ಚಾತ್ಯದಲ್ಲಿ ಪ್ರಚಾರವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಗ ಪ್ರಚಾರ ಪಡೆಯುತ್ತಿದೆ ಎಂದರು.
ದೇಶದ ಧಾರ್ಮಿಕ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದೆ. ಅಯೋಧ್ಯೆ, ಕೇದಾರ, ವಾರಣಾಸಿಯಲ್ಲಿ ಅಭಿವೃದ್ಧಿಗಳಾಗಿವೆ. ಇಲ್ಲಿ ಬದಲಾವಣೆಯನ್ನು ಭಕ್ತರು ಕಂಡಿದ್ದಾರೆ. ಮಾತ್ರವಲ್ಲದೆ, ಸರ್ಕಾರ ಶಿಕ್ಷಣಕ್ಕೂ ಒತ್ತು ನೀಡುತ್ತಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸಂದೇಶದಂತೆ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.ಕೇಂದ್ರ ಸರ್ಕಾರದ ಕಾರ್ಯವೈಖರಿಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎರಡನ್ನು ಕಾಣಬಹುದು. ಭಾರತಕ್ಕೆ ಉತ್ತಮ ಭವಿಷ್ಯವಿದೆ. ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿಪರ ಯೋಜನೆಗಳು ಆಗಲಿ ಎಂದು ಜನತೆ ಹಾರೈಸುತ್ತಿದ್ದಾರೆ ಎಂದಿದ್ದಾರೆ.