ಭಟ್ಕಳ: ರಾಜಾಂಗಣ ಶ್ರೀನಾಗಬನದ ಶ್ರೀ ಜೈನ್ ನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್ ಪ್ರತಿಷ್ಠಾ ಮಹೋತ್ಸವವೂ ಬುಧವಾರದಿಂದ ಆರಂಭಗೊಂಡಿದ್ದು, ಎರಡನೇ ದಿನವಾದ ಗುರುವಾರದಂದು ಶ್ರೀ ಜೈನ ನಾಗ ಮತ್ತು ನಾಗಯಕ್ಷಿ ದೇವರುಗಳ ನೂತನ ಮೂರ್ತಿಗಳ ಮೆರವಣಿಗೆಯು ಸಹಸ್ರಾರು ಭಕ್ತ ಸಮೂಹದಲ್ಲಿ ಸುಸಂಪನ್ನಗೊಂಡಿತು.
ಬುಧವಾರದಂದು ಮುಂಜಾನೆಯಿಂದಲೇ ಆರಂಭಗೊಂಡ ಪುನರ ಪ್ರತಿಷ್ಠಾ ಮಹೋತ್ಸವವು ಜೈನ ಸಮುದಾಯದ ಪದ್ದತಿಯಂತೆ ತಾಲೂಕಿನ ಬಸ್ತಿ ಕಾಯ್ಕಿಣಿಯ ಜೈನ ಸಮಾಜದ ಪ್ರಧಾನ ಪುರೋಹಿತರಾದ ಜ್ವಾಲಿನಿ ಕುಮಾರ ಚಂದ್ರರಾಜ ಜೈನ್ ಇಂದ್ರ ಇವರ ಪೌರೋಹಿತ್ಯದಲ್ಲಿ ಉದಯ ಜೈನ ದಂಪತಿಗಳ ನೇತೃತ್ವದಲ್ಲಿ ಪ್ರಾರ್ಥನೆ, ಇಂದ್ರ ಪ್ರತಿಜ್ಞೆ, ನಾಂದಿ, ಕಂಕಣ ಬಂಧ ಪುಣ್ಯಾವಾಚನ ಹವನ, ತೋರಣ ಮೂಹೂರ್ತ, ಧ್ವಜ ರೋಹಣ ಅಖಂಡವಾಗಿ ದೀಪ ಸ್ಥಾಪನೆ ಹಾಗೂ ಅಂಕುರಾರ್ಪಣೆಯ ಬಳಿಕ ಸಾಯಂಕಾಲ ವಾಸ್ತು ರಾಕ್ಷೋಘ್ನ ಹವನ, ವಿಮಾನ ಶುದ್ಧಿ, ದಿಗ್ಬಂಧನ ಬಲಿ ಕಾರ್ಯಕ್ರಮವೂ ಸಕಲ ವಿಧಿವಿಧಾನದಂತೆ ಜರುಗಿದವು.
ಗುರುವಾರದಂದು ಜೈನ ನಾಗ ಹಾಗೂ ನಾಗಯಕ್ಷೆಯ ನೂತನ ಮೂರ್ತಿಗಳ ಅದ್ದೂರಿ ಮೆರವಣಿಗೆಯು ಇಲ್ಲಿನ ಕರಿಬಂಟ ದೇವಸ್ಥಾನದಿಂದ ನಾಗ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಕಳಿ ಹನುಮಂತ ದೇವಸ್ಥಾನ ರಸ್ತೆಯ ಮೂಲಕ ವಡೇರ ಮಠದ ಮೂಲಕ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಹೂವಿನ ಪೇಟೆ, ಶ್ರೀಜೈನ ಬಸದಿ, ಮಾರಿಕಟ್ಟೆ ಮಾರ್ಗವಾಗಿ ರಾಜಾಂಗಣ ಶ್ರೀ ನಾಗಬನಕ್ಕೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಚಂಡೆ ಹಾಗೂ ಪಂಚ ವಾದ್ಯ ವಿಶೇಷ ಮೆರಗು ತಂದಿತು. ಮತ್ತು ಸಹಸ್ರಾರು ಭಕ್ತರು ಧಾರ್ಮಿಕ ಉಡುಗೆಯೊಂದಿಗೆ ವಿಶೇಷವಾಗಿ ಪೇಟ ಧರಿಸಿ ಮೆರವಣಿಗೆಯಲ್ಲಿ ಸಾಗಿ ಬಂದರು. ನಂತರ ನಿತ್ಯ ವಿಧಿ ಸಹಿತ ಪೀಠಶುದ್ದ ಹವನ, ಕಲಿಕುಂಡ ಯಂತ್ರ ಆರಾಧನೆ ಜಪ ನೆರವೇರಿದ್ದು, ಸಾಯಂಕಾಲ ಬಿಂಬ ಶುದ್ದಿ ಹವನ, ಬಿಂಬ ವಿನ್ಯಾಸ ಧಾನ್ಯಾದಿವಾಸ, ಬಲಿ ಕಾರ್ಯಕ್ರಮಗಳು ನಡೆದವು.
ಮೆರವಣಿಗೆಯಲ್ಲಿ ಶಾಸಕ ಸುನೀಲ ನಾಯ್ಕ ಸೇರಿದಂತೆ ಕೃಷ್ಣ ನಾಯ್ಕ ಆಸರಕೇರಿ, ಕೇಶವ ನಾಯ್ಕ, ಶ್ರೀಕಾಂತ ನಾಯ್ಕ, ನಾಗ ಬನ ಸಮಿತಿ ಅಧ್ಯಕ್ಷ ದಿಗಂಬರ ಶೇಟ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯೂದಕ್ಕೂ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶುಕ್ರವಾರದಂದು ಮುಂಜಾನೆ 10.11ಕ್ಕೆ ಮೀನ ಲಗ್ನದಲ್ಲಿ ಜೈನ ನಾಗ ಹಾಗೂ ನಾಗಯಕ್ಷೆಯ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ನಾಗಬನ ಸಮಿತಿ ಕೋರಿದೆ.