ಗುವಾಹಟಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಪ್ರತಿಪಾದಿಸಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಈ ಹಿಂದೆ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಕ್ಕಾಗಿ ಜೈಲು ಪಾಲಾಗಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
“ನಾನು 2010 ರಿಂದ 2017 ರವರೆಗೆ ಬಿಜೆಪಿ ಯುವ ಘಟಕದ ಅಧ್ಯಕ್ಷನಾಗಿ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ನಾನು ಕೋಲ್ಕತ್ತಾದಿಂದ ಕಾಶ್ಮೀರಕ್ಕೆ ರಾಷ್ಟ್ರಧ್ವಜವನ್ನು ಹಾರಿಸಲು ಯಾತ್ರೆ ಕೈಗೊಂಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ನನ್ನನ್ನು ಜೈಲಿಗೆ ಹಾಕಲಾಯಿತು. ಇಂದು ಜಮ್ಮು ಮತ್ತು ಕಾಶ್ಮೀರವು ಅಂತಹ ಯಾವುದೇ ನಿರ್ಬಂಧಗಳಿಲ್ಲದ ವಿಭಿನ್ನ ರಾಜ್ಯವಾಗಿದೆ” ಎಂದು ಐಐಟಿ ಗುವಾಹಟಿಯಲ್ಲಿ ಜಿ 20 ಇಂಡಿಯಾ ಅಡಿಯಲ್ಲಿ ಮೊದಲ ವೈ 20 ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಗಸ್ಟ್ 2019 ರ ನಂತರ, ಕೇಂದ್ರ ಸರ್ಕಾರವು 370ನೇ ವಿಧಿಯನ್ನು ತೆಗೆದು ಹಾಕಿದ ಬಳಿಕ ಈ ಪ್ರದೇಶದಲ್ಲಿ ಅಂತಹ ಯಾವುದೇ ನಿರ್ಬಂಧಗಳಿಲ್ಲ ಎಂದಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ಕಷ್ಟವಾಗಿತ್ತು. ಆದರೆ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಳೆದ ವರ್ಷ ‘ಹರ್ ಘರ್ ತಿರಂಗ’ ಕಾರ್ಯಕ್ರಮದಲ್ಲಿ ಕಾಶ್ಮೀರದ ಪ್ರತಿಯೊಂದು ಮನೆಯ ಮೇಲೆ ತಿರಂಗ ಹಾರಿಸಿರುವುದನ್ನು ನೀವು ನೋಡಿದ್ದೀರಿ” ಎಂದು ಠಾಕೂರ್ ಹೇಳಿದ್ದಾರೆ. G20 ಇಂಡಿಯಾ ಅಡಿಯಲ್ಲಿ 2023 ರಲ್ಲಿ ಮೊದಲ Y20 ಸಭೆಯು ಫೆಬ್ರವರಿ 6 ರಂದು ಗುವಾಹಟಿಯಲ್ಲಿ ಪ್ರಾರಂಭವಾಯಿತು.
ಕೃಪೆ: http://news13.in