ಶಿರಸಿ: ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಮಹತ್ವದ್ದು. ಆಯ್ಕೆಯಲ್ಲಿ ಎಡವಟ್ಟಾದರೆ ಬದುಕಿಗೆ ಸಮಸ್ಯೆ ಆಗುತ್ತದೆ. ಮಕ್ಕಳು ಪಾಠದ ಕೋಣೆಯಲ್ಲಿ ಓದುವುದು ಅನ್ನೋದಲ್ಲ, ಕಲಿಯಬಹುದು ಆಗಬೇಕು ಎಂದು ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾರಾಯಣ ಭಾಗ್ವತ್ ಹೇಳಿದರು.
ಅವರು ಯಡಹಳ್ಳಿಯಲ್ಲಿನ ವಿದ್ಯೋದಯ ಪಿಯು ಹಾಗೂ ಪ್ರೌಢ ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ, ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಮನಸ್ಸಿನಿಂದ ಓದಿದರೆ ಓದಿದ್ದು ಮರೆಯಬಹುದು. ಆದರೆ, ಹೃದಯದಿಂದ ಓದಿದರೆ ಮೆದುಳಿನಲ್ಲಿ ಸದಾ ನೆನಪಿರುತ್ತದೆ. ವಿದ್ಯೆ ನಿಜವಾದ ಸಂಪತ್ತು. ಯಾರಿಂದಲೂ ಕಸಿದು ಕೊಳ್ಳಲಾಗುವದಿಲ್ಲ. ದುಡುಕಿನ ತೀರ್ಮಾನ ಬದುಕಿಗೆ ನೋವು ಕೊಡಬಹುದು. ಬದುಕಿನ ಸ್ಪಷ್ಟತೆ ಇದ್ದರೆ ಸಮಸ್ಯೆ ಆಗದು ಎಂದು ಹೇಳಿದರು.
ಅತಿಥಿಗಳಾಗಿ ಪಾಲ್ಗೊಂಡ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಆರ್.ಹೆಗಡೆ ಮಶೀಗದ್ದೆ, ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ಆಗಬೇಕು ಎಂದರು.
ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಪಾಠದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೂಡ ತೊಡಗಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್.ಟಿ.ಭಟ್ಟ, ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಟ್ಟರೆ ಸಮಾಜಕ್ಕೂ ಉತ್ತಮ ಫಲಿತಾಂಶ ಸಿಗುತ್ತದೆ ಎಂದರು.
ಉಪನ್ಯಾಸಕ ಪಿ.ವೈ. ಗಡದ್ ಸ್ವಾಗತಿಸಿದರು. ಉಪನ್ಯಾಸಕ ಶಂಭು ಭಟ್ಟ ಪರಿಚಯಿಸಿದರು. ಪ್ರೌಢ ಶಾಲಾ ಮುಖ್ಯಾಧ್ಯಾಪಕ ಕೆ.ಜಿ.ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಪ್ರಶಸ್ತಿ ವಿತರಣೆಯನ್ನು ಉಪನ್ಯಾಸಕರಾದ ಪಿ.ವೈ.ಗಡದ್, ಕಿರಣಕುಮಾರ ಎನ್.ವೈ ನಡೆಸಿದರು. ಉಪನ್ಯಾಸಕ ಕೆ.ಆರ್.ನಾಯ್ಕ ವಂದಿಸಿದರು. ವಿದ್ಯಾರ್ಥಿಗಳಾದ ಭೂಮಿಕಾ ಭಟ್ಟ, ದರ್ಶನ ಗೌಡ ನಿರ್ವಹಿಸಿದರು.