ಕುಮಟಾ: ತಾಲೂಕಿನ ಬರ್ಗಿ ಗ್ರಾಪಂ ಪರಿಶಿಷ್ಟ ಪಂಗಡದ ಸದಸ್ಯರ ಮಾನ್ಯತೆಯ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸ್ಪಷ್ಟ ಪಡಿಸುವವರೆಗೆ ಗ್ರಾಪಂನ ಎಲ್ಲ ಕಾರ್ಯ ಕಲಾಪಗಳನ್ನು ಗ್ರಾಪಂನ ಸರ್ವ ಸದಸ್ಯರು ಬಹಿಷ್ಕರಿಸಿದ್ದಾರೆ.
ಬರ್ಗಿ ಗ್ರಾಪಂ ಸಭಾಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಲಕ್ಷ್ಮಣ ಪಟಗಾರ ಅವರು, ಬರ್ಗಿ ಗ್ರಾಮ ಪಂಚಾಯತಕ್ಕೆ 15 ಸದಸ್ಯರು ಆಯ್ಕೆಯಾಗಿದ್ದರು. ಇದರಲ್ಲಿ ಲಕ್ಷ್ಮಿ ಸೊಮಯ್ಯ ಗೊಂಡ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಸದಸ್ಯರಾಗಿ ಪಡುವಣಿ ವಾರ್ಡ್ನಿಂದ ಆಯ್ಕೆಯಾಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರನ್ನು ಗ್ರಾಪಂ ಸಭೆ-ಸಮಾರಂಭಗಳಿಗೆ ಅಧಿಕೃತ ಆಹ್ವಾನ ನೀಡಲಾಗುತ್ತಿಲ್ಲ. ಹೀಗಾಗಿ 15ನೇ ಸದಸ್ಯರ ಮಾನ್ಯತೆ ಕುರಿತು ನಮ್ಮಲ್ಲಿ ಜಿಜ್ಞಾಸೆ ಮೂಡಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸದಸ್ಯತ್ವ ಮಾನ್ಯತೆಯ ಬಗ್ಗೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಸದಸ್ಯ ರಾಮ ಕೃಷ್ಣಪ್ಪ ಪಟಗಾರ ಮಾತನಾಡಿ, ಬರ್ಗಿ ಗ್ರಾಪಂ 15 ಸದಸ್ಯರನ್ನು ಒಳಗೊಂಡಿದೆ. ಕಳೆದ ಒಂದು ವರ್ಷದಿಂದ ಕೇವಲ 14 ಸದಸ್ಯರನ್ನು ಮಾತ್ರ ಸಭೆಯ ಕಲಾಪಗಳಲ್ಲಿ ಪಾಲಗೊಳ್ಳಲು ನೋಟಿಸ್ ನೀಡಲಾಗುತ್ತಿದೆ. 15ನೇ ಸದಸ್ಯೆ ಲಕ್ಷ್ಮಿ ಸೋಮಯ್ಯ ಗೊಂಡ ಅವರನ್ನು ಸಭೆಗೆ ಆಹ್ವಾನಿಸಲಾಗುತ್ತಿಲ್ಲ. ಅವರು ಪರಿಷಿಷ್ಟ ಪಂಗಡ ಮಿಸಲಾತಿ ಪಡುವಣಿ ವಾರ್ಡ್ನಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಹಿಂದೆ ನಡೆದ ಅಧ್ಯಕ್ಷರ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಇವರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಅಲ್ಲದೇ ಚುನಾವಣೆ ಆಯೋಗದ ನಿರ್ದೇಶನದಂತೆ ತಮ್ಮ ಆಸ್ತಿ ಘೋಷಣೆ ಸಹ ಮಾಡಿದ್ದಾರೆ. ಹೀಗಿದ್ದರು ಕಳೆದ ಒಂದು ವರ್ಷದಿಂದ ಗ್ರಾಪಂ ಸಭೆಯ ಕಲಾಪಗಳಲ್ಲಿ ಭಾಗವಹಿಸಲು ನೋಟಿಸ್ ನೀಡದೇ ಇರುವ ಅಧಿಕಾರಿಗಳ ನಡೆ ಬಗ್ಗೆ ಹಲವು ಅನುಮಾನಗಳು ಮೂಡುವಂತಾಗಿದೆ. ಯಾವುದೇ ಸದಸ್ಯರ ಸದಸತ್ವ ಅನರ್ಹಗೊಂಡಲ್ಲಿ ಆರು ತಿಂಗಳೊಳಗೆ ಆ ಕ್ಷೇತ್ರಕ್ಕೆ ಚುನುವಣೆ ನಡೆಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಬೇಕೆಂಬ ನಿಯಮ ಇದೆ. ಆದರೆ ವರುಷ ಕಳೆದರೂ ಇಲಾಖೆ ಮೇಲಾಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಮೌನವಾಗಿರುವುದು ಸಂವಿಧಾನದ ವಿರೋಧಿ ನೀತಿಯಾಗಿದೆ. ಹಾಗಾಗಿ ಗ್ರಾಪಂನ ಮುಂದಿನ ಕಾರ್ಯ ಕಲಾಪಗಳಲ್ಲಿ 15 ಸದಸ್ಯರು ಕಡ್ಡಾಯವಾಗಿ ಇರಲೇ ಬೇಕು. ಇಲ್ಲದಿದ್ದರೆ 14 ಸದಸ್ಯರಾದ ನಾವು ಯಾವುದೇ ಕಲಾಪಗಳಲ್ಲಿ ಭಾಗವಹಿಸುವುದಿಲ್ಲ. 15ನೇ ಸದಸ್ಯತ್ವದ ಸಮಸ್ಯೆ ಇತ್ಯರ್ಥಗೊಳ್ಳುವರೆಗೆ ಗ್ರಾಪಂ ನ ಎಲ್ಲಾ ಕಾರ್ಯ ಕಲಾಪಗಳನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.
ಬಳಿಕ ಎಲ್ಲ ಸದಸ್ಯರು ಪಕ್ಷಾತೀತವಾಗಿ ಸೇರಿ ಗ್ರಾಪಂ ಪಿಡಿಒ ಕವಿತಾ ನಾಯಕ ಅವರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪಿಡಿಒ ಅವರು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯಂತೆ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬರ್ಗಿ ಗ್ರಾಪಂ ಉಪಾಧ್ಯಕ್ಷೆ ಭಾರತಿ ಹರಿಕಂತ್ರ, ಸದಸ್ಯರಾದ ಸಂತೋಷ ಹರಿಕಂತ್ರ, ಜೈನಾಬಿ ಹುಸೇನ್ ಮೊನ್ನ, ನವೀಣ ಪಟಗಾರ, ಮಹಾಲಕ್ಷ್ಮಿ ಶೆಟ್ಟಿ, ರಿವಿಕುಮಾರ ನಾಯ್ಕ, ಮಂಗಲಾ ನಾಯಕ, ಮಾಲತಿ ಅಗೇರ, ವಿಠೋಬ ಗಾವಡಿ, ದಾವೂದ್ ಅಲಿ ಘಾರಿಯಾ, ಇಸಾಕ್ ಇಗ್ರಾಹಿಂ ಕೊತ್ವಾಲ್, ಮುಬಾರಕ್ ಬೇಗಂ ಬುಧವಂತ ಉಪಸ್ಥಿತರಿದ್ದರು.