ಕಾರವಾರ: ಭಾರತದ ಮೊದಲ ವಿಮಾನವಾಹಕ ನೌಕೆಯಾಗಿರುವ ಐಎನ್‌ಎಸ್ ವಿಕ್ರಮಾದಿತ್ಯವು ಈ ತಿಂಗಳ ಅಂತ್ಯದಲ್ಲಿ ಸೀಬರ್ಡ್ ನೌಕಾನೆಲೆಯಿಂದ ನೌಕಾಯಾನ ಕೈಗೊಳ್ಳುವ ನಿರೀಕ್ಷೆಯಿದೆ. ಮಾರ್ಚ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವ ಕಂಬೈನ್ಡ್ ಕಮಾಂಡರ್ಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಐಎನ್‌ಎಸ್ ವಿಕ್ರಮಾದಿತ್ಯವು ಪ್ರಮುಖ ಆಕರ್ಷಣೆಯಾಗಿರಲಿದೆ.
ಈ ವಿಮಾನವಾಹಕ ಯುದ್ಧನೌಕೆಯು ಜನವರಿ 30ರಂದು ನೌಕಾಯಾನ ಆರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮುಂಗಾರಿಗೆ ಮುನ್ನ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿಕ್ರಾಂತ್‌ನ ಯುದ್ಧ ಸಾಮರ್ಥ್ಯದ ಪರೀಕ್ಷೆಯನ್ನು ಭಾರತೀಯ ನೌಕಾಪಡೆ ಆರಂಭಿಸುವ ನಿರೀಕ್ಷೆಯಿದೆ. ಇಂಡೋ ಪೆಸಿಫಿಕ್ ಸಾಗರದಲ್ಲಿ ಈ ಎರಡು ನೌಕೆಗಳು ಭಾರತೀಯ ನೌಕಾಪಡೆಗೆ ಬಲ ತುಂಬಲಿವೆ. ಈಗಾಗಲೇ ಭಾರತೀಯ ನೌಕಾಪಡೆಯು ಈ ಎರಡು ಯುದ್ಧ ನೌಕೆಗಳ ಪರೀಕ್ಷಾರ್ಥ ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿದೆ. ಈ ವರದಿ ಆಧರಿಸಿ ಕೇಂದ್ರ ಸರಕಾರವು ನಿರ್ಧಾರ ಕೈಗೊಳ್ಳಲಿದೆ. ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ರಷ್ಯಾದ ಮಿಗ್ 29ಕೆ ಯುದ್ಧ ವಿಮಾನಗಳು ಪ್ರಮುಖ ಶಸ್ತ್ರಾಸ್ತ್ರಗಳಾಗಿರಲಿವೆ.
ಭಾರತದ ಪೂರ್ವ ಸಮುದ್ರ ತೀರದಲ್ಲಿರುವ ವಿಶಾಖಪಟ್ಟಣಂನಲ್ಲಿ ಬೃಹತ್ ಯುದ್ಧ ಯಂತ್ರಗಳನ್ನು ನಿರ್ವಹಿಸಲು ಜೆಟ್ಟಿ ಸಿದ್ಧವಾಗುವವರೆಗೆ ಈ ಎರಡೂ ವಿಮಾನವಾಹಕ ನೌಕೆಗಳು ಭಾರತದ ಪಶ್ಚಿಮ ಕರಾವಳಿಯನ್ನು ಅವಲಂಬಿಸಬೇಕಿದೆ. ಭಾರತೀಯ ನೌಕಾಪಡೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದ್ವೀಪ ಪ್ರದೇಶದ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಮತ್ತು ಉತ್ತರ ಚೆನ್ನೈನ ಕಟ್ಟುಪಲ್ಲಿ ಬಂದರಿನಲ್ಲಿ ಇಂತಹ ವಿಮಾನವಾಹಕ ನೌಕೆಗಳನ್ನು ನಿಲ್ಲಿಸಲು ಅನುವಾಗುವಂತೆ ಜೆಟ್ಟಿಗಳನ್ನು (ಯುದ್ಧ ವಿಮಾನ ನಿಲ್ಲಿಸುವ ಡಾಕ್‌ಗಳು) ಗುತ್ತಿಗೆಗೆ ಪಡೆಯಲು ನಿರ್ಧರಿಸಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಎರಡು ವಿಮಾನವಾಹಕ ನೌಕೆಗಳು ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಾಚೆಯ ಭದ್ರತೆ ನೋಡಿಕೊಳ್ಳಲು ನಿಯೋಜನೆಯಾಗಲಿವೆ. ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿಯ ಕಡಲ ಪ್ರಾಬಲ್ಯಕ್ಕೆ ಭಾರತಕ್ಕೆ ಈ ಎರಡು ವಿಮಾನವಾಹಕ ನೌಕೆಗಳ ಅಗತ್ಯವಿಲ್ಲ. ಆದರೆ, ಇಂಡೋ ಪೆಸಿಫಿಕ್ ಮತ್ತು ಅದರಾಚೆಗಿನ ಕಡಲ ಪಾರಮ್ಯ ಸಾಧಿಸಲು ಇವುಗಳ ಅಗತ್ಯವಿದೆ. ಈ ನೌಕೆಗಳಿಗೆ ಬೇಕಾಗುವ ಕೆಲವು ಫೈಟರ್‌ಗಳನ್ನು ಭಾರತ ಮುಂದಿನ ದಿನಗಳಲ್ಲಿ ಖರೀದಿಸಲಿದೆ ಎನ್ನಲಾಗಿದೆ.
ಕಳೆದ ವರ್ಷ ಕಾರವಾರದಲ್ಲಿ ದುರಸ್ತಿ ವೇಳೆ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ವಿಕ್ರಮಾದಿತ್ಯದ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಕೆಲವು ತಿಂಗಳುಗಳಿಂದ ನೌಕೆ ಬಳಕೆಯಲ್ಲಿರಲಿಲ್ಲ. ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಬಳಿಕ ಪ್ರಯೋಗಾರ್ಥ ಕಾರ್ಯಾಚರಣೆಗಳನ್ನು ನಡೆಸುವ ಸಂದರ್ಭದಲ್ಲಿ ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ನೌಕಾ ಸಿಬ್ಬಂದಿ ಒಮ್ಮೆಲೆ ಆತಂಕಿತರಾದರೂ, ಯುದ್ಧನೌಕೆಯಲ್ಲಿ ಅಳವಡಿಸಲಾದ ಅಗ್ನಿಶಾಮಕ ವ್ಯವಸ್ಥೆಯ ಸಹಕಾರದಿಂದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.