ಕುಮಟಾ: ತಾಲೂಕಿನ ಕಲಭಾಗದ ದೇವಗುಂಡಿಯಿoದ ಶಶಿಹಿತ್ತಲ್ವರೆಗಿನ 2.96 ಕೋಟಿ ರೂ. ವೆಚ್ಚದ ಖಾರ್ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು.
ತಾಲೂಕಿನ ಕಲಭಾಗ ಗ್ರಾಪಂ ವ್ಯಾಪ್ತಿಯ ದೇವಗುಂಡಿಯಿoದ ಶಶಿಹಿತ್ತಲ್ವರೆಗೆ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಮಂಜೂರಾದ ಖಾರ್ಲ್ಯಾಂಡ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ದಿ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಈ ಜಿಲ್ಲೆಯ ಕರಾವಳಿ ಭಾಗದಲ್ಲಿ ಖಾಲ್ಯಾಂಡ್ ನಿರ್ಮಿಸಲಾಗಿತ್ತು. ಇದರಿಂದ ಈ ಭಾಗದ ಮೀನುಗಾರರಿಗೆ, ರೈತರಿಗೆ ಅನುಕೂಲವಾಗಿತ್ತು. ಅದರ ನಂತರ ಈ ಖಾರ್ಲ್ಯಾಂಡ್ನ ರಿಪೇರಿ ಕೂಡ ಮಾಡಲು ಸಾಧ್ಯವಾಗಿಲ್ಲ. ಈಗಿನ ನಮ್ಮ ಸರ್ಕಾರ ಖಾಲ್ಯಾಂಡ್ನ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಮೀನುಗಾರರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವಂತಹ ಯೋಜನೆ ರೂಪಿಸಿದೆ.
ಕರಾವಳಿ ಭಾಗದಲ್ಲಿ ರೈತರ ಜಮೀನಿಗೆ ಉಪ್ಪುನೀರು ನುಗ್ಗಿ ಬೆಳೆಗಳಿಗೆ ಹಾನಿಯನ್ನು ಉಂಟುಮಾಡುತ್ತಿತ್ತು. ಇದರಿಂದ ರೈತರು ಅಪಾರ ನಷ್ಟವನ್ನು ಎದುರಿಸುತ್ತಿದ್ದರು. ರೈತರನ್ನು ಈ ಸಂಕಷ್ಟದಿoದ ಪಾರುಮಾಡುವ ಉದ್ದೇಶದಿಂದ ಸಚಿವರಾದ ಮಾಧು ಸ್ವಾಮಿಯವರು ಖಾರ್ಲ್ಯಾಂಡ್ ನಿರ್ಮಾಣಕ್ಕೆ ವಿಶೇಷ ಕಾಳಜಿವಹಿಸಿ, ದೊಡ್ಡಪ್ರಮಾಣದ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಈ ಯೋಜನೆಯಿಂದ ಕೃಷಿ, ಮೀನು ಹಾಗೂ ಸೀಗಡಿ ಉತ್ಪಾದಕರಿಗೂ ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಲಭಾಗ ಗ್ರಾಪಂ ಅಧ್ಯಕ್ಷೆ ಗೀತಾ ಕುಬಾಲ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯರಾದ ಗೌರಿಶ ಕುಬಾಲ, ಮಂಜುಳಾ ಮುಕ್ರಿ, ರೂಪಾ ಭಂಡಾರಿ, ಪಿಡಿಒ ಪ್ರಜ್ಞಾ ನಾಯ್ಕ, ನಿವೃತ್ತ ಸೈನಿಕ ನಾಗೇಶ ಪಟಗಾರ, ಪ್ರಮುಖರಾದ ಜೈವಿಠ್ಠಲ್ ಕುಬಾಲ, ರಾಜು ಪಟಗಾರ, ದೇವರಾಯ ನಾಯ್ಕ ಹಾಗೂ ಊರನಾಗರಿಕರು ಉಪಸ್ಥಿತರಿದ್ದರು.