ಭಟ್ಕಳ: ತಾಲ್ಲೂಕಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಗೆ ಗಡಿ ದೇವರ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಜಾತ್ರೆಯ ಮೊದಲ ದಿನ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ, ಕಾಣಿಕೆ ಹಾಗೂ ಪೂಜೆಗಳನ್ನು ಸಲ್ಲಿಸಿದರು. ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹರಕೆ ಮಾಡಿಕೊಂಡರೆ, ಕಷ್ಟಗಳಿಗೆ ಪರಿಹಾರ ಸಿಕ್ಕು ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿoದಲೂ ನಡೆದುಕೊಂಡು ಬಂದ ವಾಡಿಕೆ.
ಅದರಂತೆ ಜಾತ್ರೆಯ ಈ ಸಂದರ್ಭದಲ್ಲಿ ಅನೇಕರು ಈ ಹರಕೆ ತೀರಿಸಿದರು. ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಎದುರಿನಲ್ಲಿ ಸಿಂಗರಿಸಿದ್ದ ಶೇಡಿಮರವನ್ನೇರಿದವರನ್ನು ಮೂರು ಸುತ್ತು ತಿರುಗಿಸಲಾಯಿತು. ಈ ವೇಳೆ ಅವರು ತಾವು ತಂದಿದ್ದ ಸಿಂಗಾರ, ಬಾಳೆಹಣ್ಣನ್ನು ಕೆಳಗಡೆಯಿರುವ ಭಕ್ತರ ಮೇಲೆ ಎಸೆದು ಹರಕೆ ತೀರಿಸಿದರು.