ಕುಮಟಾ: ತಾಲೂಕಿನ ಹೆಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಹೆಗಡೆಯ ಗ್ರಾಮಸ್ಥರು ಶಿಕ್ಷಣಾಸಕ್ತರಾಗಿದ್ದು ತಮ್ಮ ಊರಿನ ಶಾಲೆಗಾಗಿ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಕೈಜೋಡಿಸಿ ಶ್ರಮಿಸುತ್ತಾರೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಶಿಕ್ಷಕರು ಕೂಡ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ಸೇವೆಸಲ್ಲಿಸುತ್ತಿದ್ದಾರೆ. ನಮ್ಮ ಸರ್ಕಾರವು ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ವಿಶೇಷ ಕಾಳಜಿವಹಿಸಿದೆ. ಹೊಸ ಕೊಠಡಿಗಳ ನಿರ್ಮಾಣ ಹಾಗೂ ಹಳೆಯ ಕೊಠಡಿಗಳ ದುರಸ್ಥಿಗಾಗಿ ವಿಶೇಷ ಅನುದಾನಗಳನ್ನು ಒದಗಿಸಿದೆ. ಹೆಗಡೆ ಸೇರಿ ಒಂಭತ್ತು ಪಂಚಾಯತ ಮನೆ ಮನೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಹಾಗೂ ಹೆಗಡೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿನಿಯರಾದ ಶಶಿಕಲಾ ನಾಯ್ಕ್ ಹಾಗೂ ಅಕ್ಷತಾ ನಾಯ್ಕರನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಗಡೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಾಂತಾರಾಮ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರು ಶಾನಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್.ಭಟ್, ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕ, ಕ. ರಾ. ಪ್ರಾ. ಶಿ. ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಕಲ್ಪನಾ ಪಟಗಾರ, ಶಾಲಾ ಮುಖ್ಯಶಿಕ್ಷಕಿ ಮಂಗಲಾ ಹೆಬ್ಬಾರ, ಹೆಗಡೆ ಗ್ರಾಮಪಂಚಾಯತ್ ಸದಸ್ಯರಾದ ಬಿ. ಜಿ. ಶಾನಭಾಗ, ರಾಮಚಂದ್ರ ಪಟಗಾರ, ವಿದ್ಯಾಲಕ್ಷ್ಮೀ ಗೌಡ, ರಾಜು ಮುಕ್ರಿ, ಎಸ್ ಡಿಎಂಸಿ ಅಧ್ಯಕ್ಷ ಪ್ರಕಾಶ ನಾಯ್ಕ ಇದ್ದರು.