ಕಾರವಾರ: ಕಾನೂನು ಉಲ್ಲಂಘಿಸಿ ದೆಹಲಿಗೆ ವೀಸಾ ವಿಸ್ತರಣೆಗೆ ತೆರಳಿದ್ದ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪತಿಗೆ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೂಲತಃ ಪಾಕಿಸ್ತಾನದ ಕರಾಚಿಯವಳಾದ ನಾರಾ ಪರವೀನ್ ಮಹ್ಮದ್ ಇಲಿಯಾಸ್ ಭಟ್ಕಳದ ಮೌಲಾನಾ ಆಜಾದ್ ರೋಡ್‌ನ ನಿವಾಸಿಯಾಗಿದ್ದು, ತನ್ನ ಪತಿ ಮಹ್ಮದ್ ಇಲಿಯಾಸ್ ಮಹ್ಮದ್ ಇಸ್ಮಾಯಿಲ್ ಪಿಲ್ಲೂರ ಅವರ ಜತೆಗೆ ಜೂ17, 2014ರಂದು ಸ್ಥಳೀಯ ಪೊಲೀಸ್ ಠಾಣೆಗೆ, ಎಫ್‌ಆರ್‌ಒಗೆ ಮಾಹಿತಿ ನೀಡದೇ ದೆಹಲಿಗೆ ವಿಸಾ ವಿಸ್ತರಣೆಗೆ ತೆರಳಿದ್ದಳು. ವಿದೇಶಿ ಕಾಯ್ದೆ 194 ನೇದರಂತೆ ವಿಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್, ಒಂದನೇ ಆರೋಪಿಯಾದ ಮಹ್ಮದ್ ಇಲಿಯಾಸ್ ಮಹ್ಮದ್ ಇಸ್ಮಾಯಿಲ್ ಪಿಲ್ಲೂರ ಒಂದು ತಿಂಗಳ ಸಾದಾ ಸಜೆ ಮತ್ತು 10,000 ರು. ದಂಡವನ್ನು ಪಾವತಿ, ದಂಡ ಪಾವತಿ ಮಾಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ಹಾಗೂ 2ನೇ ಆರೋಪಿ ನಾರಾ ಪರವೀನ್ ಮಹ್ಮದ್ ಇಲಿಯಾಸ್‌ಗೆ ಆರು ತಿಂಗಳ ಸಾದಾ ಸಜೆ, 10,000 ರು. ದಂಡ ವಿಧಿಸಿದ್ದಾರೆ. ದಂಡ ಪಾವತಿ ಮಾಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಪ್ರಧಾನ ವಕೀಲರಾದ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.
ಪ್ರಶಾಂತ್ ನಾಯಕ ನೇತೃತ್ವದಲ್ಲಿ ನಡೆದಿದ್ದ ತನಿಖೆ
2014ರಲ್ಲಿ ಭಟ್ಕಳ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಪ್ರಶಾಂತ್ ನಾಯಕ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಪಾಕಿಸ್ತಾನಿ ಮಹಿಳೆ ವಿಸಾ ಉಲ್ಲಂಘನೆ ಮಾಡಿದ ಪ್ರಕರಣ ತಿಳಿಯುತ್ತಿದ್ದಂತೆ ಪ್ರಶಾಂತ್ ನಾಯಕ ಕಾರ್ಯಾಚರಣೆಗೆ ಇಳಿದ್ದದರು.
ದೂರನ್ನು ದಾಖಲಿಸಿ ದೆಹಳಿಗೆ ತೆರಳಿದ್ದ ಪ್ರಶಾಂತ್ ನಾಯಕ್ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ದೆಹಲಿಯಲ್ಲಿ ಪತಿ- ಪತ್ನಿ ಉಳಿದಿದ್ದ ಲಾಡ್ಜಿನ ಮಾಲಿಕರಿಂದ ಸಾಕ್ಷಿಯನ್ನು ಹೇಳಿಕೆ ನೀಡುವಂತೆ ಮಾಡಿದ್ದರು.
ಇದರ ಪರಿಣಾಮವಾಗಿ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪತಿಗೆ ಶಿಕ್ಷೆ ಪ್ರಕಟವಾಗಿದೆ. ಇನ್ನು ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಆರ್.ದಿಲೀಪ್ ಸಾವನ್ನಪ್ಪುವ ಕೆಲವೇ ದಿನದ ಮುಂಚೆ ಕಾರವಾರ ನ್ಯಾಯಾಲಯಕ್ಕೆ ಬಂದು ಈ ಪ್ರಕರಣದಲ್ಲಿ ಸಾಕ್ಷಿಯನ್ನು ಹೇಳಿ ಹೋಗಿದ್ದರು.