ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರ ನಿರ್ಲಕ್ಷಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನ ಬಗೆಹರಿಸಲು ಅಗ್ರಹಿಸಿ ಜನವರಿ 7, ಶನಿವಾರದಂದು ಅರ್ಧ ದಿನದ ಸ್ವ ಪ್ರೇರಣೆಯಿಂದ ಶಿರಸಿ ಬಂದ್ ಹಾಗೂ ಅಂದು 10.30 ಕ್ಕೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಹೋರಾಟಗಾರರ ವೇದಿಕೆಯು ನಿರ್ಣಯಿಸಿದೆ ಎಂದು ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜರುಗಿದ ಸಭೆಯ ನಂತರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸಭೆಯ ತೀರ್ಮಾನವನ್ನು ಪ್ರಕಟಿಸಿದರು.
ಬೆಳಗಾಂವ ಚಳಿಗಾಲದ ವಿಧಾನ ಸಭೆ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಪರಿಹಾರ ನಿರ್ಣಯ ತೆಗೆದುಕೊಳ್ಳದೇ ಇರುವುದು ಹಾಗೂ ಅಸಮರ್ಪಕ ಜಿಪಿಎಸ್ ಆಧಾರ ಒಕ್ಕಲೆಬ್ಬಿಸುವ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಗಿತಕ್ಕೆ ಆದೇಶಿಸದೇ ಇರುವ ಹಿನ್ನೆಲೆಯಲ್ಲಿ ಮೇಲಿನಂತೆ ನಿರ್ಣಯ ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುಫ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ತೀರಸ್ಕಾರವಾಗಿರುವ ಅತಿಕ್ರಮಣದಾರರನ್ನ ಹಂತಹಂತವಾಗಿ ಒಕ್ಕಲೆಬ್ಬಿಸಲು ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸಿರುವುದರಿಂದ, ಬೆಳಗಾಂವ ಅಧಿವೇಶನದಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ ಒತ್ತಾಯಿಸಿದಾಗಲೂ ಸರಕಾರ ಸ್ಪಂದಿಸದೇ ಇರುವುದರಿಂದ ಹಾಗೂ ಅಸಮರ್ಪಕ ಜಿಪಿಎಸ್ ಆಧಾರದ ಮೇಲೆ ಒಕ್ಕಲೆಬ್ಬಿಸುವ ಕಾನೂನು ಬಾಹಿರ ಕೃತ್ಯ ಸ್ಥಗಿತಗೊಳಿಸುವಂತೆ ಅರಣ್ಯ ಸಂರಕ್ಷಣಾಧಿಕಾರಿಗೆ ನೀಡಿದ ಕಾಲಮಾನದಂಡ ನೀಡಿದಾಗಲೂ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಹೋರಾಟದ ತೀವ್ರತೆ ಹೆಚ್ಚಿಸುವ ಉದ್ದೇಶದಿಂದ ಜನವರಿ 7 ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಭಾಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ:
ಜ್ವಲಂತ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗಂಭೀರವಾಗಿ ಪರಿಗಣಿಸದೇ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚಿಸದೇ ಅರಣ್ಯವಾಸಿಗಳ ಪರವಾಗಿ ತೀರ್ಮಾನಗೊಳ್ಳದಿರುವ ಕುರಿತು ಸಭೆಯಲ್ಲಿ ಚರ್ಚಿಸಿ ಸಭಾಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶವು ಸಭೆಯಲ್ಲಿ ವ್ಯಕ್ತವಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ವಿವಿಧ ತಾಲೂಕ ಅಧ್ಯಕ್ಷರಾದ ಲಕ್ಷ್ಮಣ ಮಾಳ್ಳಕ್ಕನವರ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ಮಂಜುನಾಥ ಮರಾಠಿ, ಸೀತಾರಾಮ ಗೌಡ, ಹಾಗೂ ಹೋರಾಟಗಾರರ ಧುರೀಣರಾದ ಮಾಬ್ಲೇಶ್ವರ ನಾಯ್ಕ ಸಿದ್ಧಾಪುರ, ಇಬ್ರಾಹಿಂ ಗೌಡಳ್ಳಿ, ಸುನೀಲ್ ನಾಯ್ಕ ಸಂಪಖAಡ, ರಾಘು ಕವಂಚೂರು, ದಿನೇಶ್ ನಾಯ್ಕ ಬೇಡ್ಕಣಿ, ರಾಮಚಂದ್ರ ಮರಾಠಿ, ಎಮ್ ಆರ್ ನಾಯ್ಕ ಕಂಡ್ರಾಂಜಿ, ಚಂದ್ರು ಶಾನಭಾಗ, ಸುರೆಶ್ ನಾಯ್ಕ ಕಂಡ್ರಾಜಿ, ಶೇಖಯ್ಯ ಹಿರೇಮಠ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.