ಅಂಕೋಲಾ: ಲೈಟ್ ಫಿಶಿಂಗ್ ಮಾಡದಂತೆ ಕೇಂದ್ರ ಸರಕಾರದ ಅದೇಶವಿದ್ದರೂ ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟನ್ನು ತಡೆದ ಮೀನುಗಾರರು ಮೂವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಗಾಬಿತಕೇಣಿಯಲ್ಲಿ ನಡೆದಿದೆ.
ದಿಢೀರ್ ಪ್ರತಿಭಟನೆಗೆ ಇಳಿದ ಸಾಂಪ್ರದಾಯಿಕ ಮೀನುಗಾರಿಕೆಯ ಮೀನುಗಾರರು ಲೈಟ್ ಫಿಶಿಂಗ್ ಬ್ಯಾನ್ ಇದ್ದರೂ ಕೂಡ ಅದನ್ನು ನಡೆಸುತ್ತಿದ್ದವರ ವಿರುಧ್ಧ ಆಕ್ರೋಷ ವ್ಯಕ್ತಪಡಿಸಿ ಬೋಟನ್ನು ಜಪ್ತು ಮಾಡಿ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಬುಧವಾರ ರಾತ್ರಿ ವೇಳೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದಾಗ ಅಲ್ಲಿ ಲೈಟ್ ಫಿಶಿಂಗ್ ನಡೆಸುತ್ತಿದ್ದುದನ್ನು ಕಂಡ ಮೀನುಗಾರರು ಅವರನ್ನು ತಡೆಯಲು ಯತ್ನಿಸಿದಾಗ ಅದರಲ್ಲಿರುವ ಕಾರ್ಮಿಕರು ಕಲ್ಲು ಮತ್ತು ಕಟ್ಟಿಗೆಯ ತುಂಡುಗಳಿoದ ಹಲ್ಲೆ ಮಾಡಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಗಾಬಿತ ಕೇಣಿಯ ಇನ್ನಷ್ಟು ಮಂದಿ ಮೀನುಗಾರರು ಸ್ಥಳಕ್ಕೆ ತೆರಳಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟನ್ನು ಸುತ್ತುವರಿದು ಬೋಟನ್ನು ಈಚೆಗೆ ತಂದು ಲಂಗರು ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ 112 ಪೊಲೀಸರಿಗೆ, ಮೀನುಗಾರಿಕಾ ಇಲಾಖೆಗೆ ಮತ್ತು ಕರಾವಳಿಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿಗೆ ಆಗಮಿಸಿದ ಪಿಎಸ್ಐ ಪ್ರೇಮನಗೌಡ ಪಾಟೀಲ ಮತ್ತು ಸಿಬ್ಬಂದಿ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಕರಾವಳಿ ಕಾವಲು ಪಡೆಯ ಪಿಎಸ್ಐ ಸುರೇಶ ನಾಯಕ ನಾಡದೋಣಿಯ ಮೂಲಕ ಬೋಟ್ ಇದ್ದಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪಕ್ಕದ ತಾಲೂಕಿನ ಕುಮಟಾದ ವ್ಯಕ್ತಿಯೊಬ್ಬರ ಮಾಲಿಕತ್ವದ ಆರ್ಯಾದುರ್ಗಾ ಬೋಟ್ ಇದಾಗಿದ್ದು, ಇಲಿಯಾಸ್ ಎನ್ನುವವರು ಲೀಸ್ ಮೇಲೆ ಪಡೆದಿದ್ದಾರೆ ಎನ್ನಲಾಗಿದೆ. ಮೀನುಗಾರಿಕೆಯ ಲೈಸನ್ಸ ಹೊಂದಿದ್ದರೂ ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡಲು ಲೈಟಿಂಗ್ ಸಾಮಗ್ರಿ, ಜನರೇಟರ್, ಬ್ಯಾಟರಿ ಮುಂತಾದ ಸಲಕರಣೆಗಳು ಕಂಡುಬoದಿದೆ. ನೋಂದಣಿಯಾದ ಎಂಜಿನ್ ನಂಬರ ವ್ಯತ್ಯಾಸವಿದೆ ಅಲ್ಲದೆ ಬೋಟಿನಲ್ಲಿ ಯಾವುದೇ ರಕ್ಷಣಾ ಸಾಮಗ್ರಿ ಇರುವದಿಲ್ಲ. ಇವೆಲ್ಲವನ್ನು ಪರಿಶೀಲಿಸಿ ಬೋಟಿನಲ್ಲಿದ್ದ ಮೂವರು ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಮೀನುಗಾರರು ಮತ್ತು ಅಧಿಕಾರಿಗಳ ನಡುವೆ ಕೆಲವು ಕಾಲ ಮಾತಿನ ಚಕಮಕಿ ನಡೆಯಿತ್ತಾದರೂ ಮೀನುಗಾರರನ್ನು ಸಮಾಧಾನ ಪಡಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮೀನುಗಾರರು ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಲೈಟ್ ಫಿಶಿಂಗ್ ಮಾಡುತ್ತಿದ್ದವರ ವಿರುದ್ಧ ದೂರು ನೀಡಿದ್ದಾರೆ.
ಕೋಟ್…
ಅಂಕೋಲಾದ ಗಾಬಿತ ಕೇಣಿ ಸಮುದ್ರ ವ್ಯಾಪ್ತಿಯಲ್ಲಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬಗ್ಗೆ ಪರಿಶೀಲನೆ ವೇಳೆ ದೃಢಪಟ್ಟಿದೆ. ಈ ಕುರಿತು ಮೀನುಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ವರದಿ ನೀಡಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವದು. ಅನಧಿಕೃತ ಲೈಟ್ ಫಿಶಿಂಗ್ ಮತ್ತು ಮೀನುಗಾರರ ಮೇಲೆ ಹಲ್ಲೆಯತ್ನ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
• ರೆನಿಟಾ ಡಿಸೋಜಾ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ