ಶಿರಸಿ: ಹವ್ಯಕ ಸಮುದಾಯದ ಮೂಲವನ್ನು ನೆನಪಿಸುವ ರಾಜನ ಆಹ್ವಾನದ ಮೇರೆಗೆ ಗುಳೇ ಹೊರಟ ಸನ್ನಿವೇಶ, ಸಾಗುವ ಮಾರ್ಗದಲ್ಲಿ ಅನುಭವಿಸುವ ಕಷ್ಟ ಕಾರ್ಪಣ್ಯ, ದುಃಖ ದುಮ್ಮಾನ, ನಂತರ ವಾಸ ಸ್ಥಳದಲ್ಲಿ ಆಗುವ ಆನಂದ, ಮೂಲದಿಂದಲೂ ನಡೆದು ಬಂದ ಆಚರಣೆ ಅನುಸರಿಸುವ ಪದ್ಧತಿ ಇವೆಲ್ಲವನ್ನೂ ರಂಗಭೂಮಿಯಲ್ಲಿ ಮೂರು ತಾಸಿನ ನಾಟಕದಲ್ಲಿ ಪ್ರದರ್ಶಿಸುವುದು ಹೆಮ್ಮೆಯ ಸಂಗತಿ.
ನಿಜ ಈ ಸಂಗತಿಗಳೆಲ್ಲವೂ ನಡೆಯುವುದು ಹವ್ಯಕ ನಾಟಕ ‘ಅಹಿಚ್ಛತ್ರ’ದಲ್ಲಿ. ಹೊನ್ನಾವರದ ಉಪ್ಲೆಯ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (ರಿ) ನವರು ಜನಹಿತ ಸೇವಾ ಫೌಂಡೇಶನ್ ಸಹಯೋಗದಲ್ಲಿ ನಗರದ ಟಿ. ಆರ್. ಸಿ. ಬ್ಯಾಂಕಿನ ಸಭಾಭವನದಲ್ಲಿ ಡಿ.25,ರವಿವಾರದಂದು ಪ್ರದರ್ಶಿಸಿದ ನಾಟಕವು ಎಲ್ಲರ ಗಮನ ಸೆಳೆಯಿತು.
ಅಪರಂಜಿ ಕಡತೋಕಾರಚಿಸಿದ ಕಾವ್ಯವನ್ನು ಆಯ್ದು ನಿರ್ದೇಶಸಿದವರು ಉಪ್ಲೆ ಕೃಷ್ಣಾನಂದ ಭಟ್. ನಾಟಕ ಪ್ರದರ್ಶನದಲ್ಲಿ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಸನ್ನಿವೇಶಗಳ ಸಮ್ಮಿಲನವಿರುವುದು ವಿಶೇಷವಾಗಿದೆ. ಸರಿ ಸುಮಾರು 40 ಕಲಾವಿದರನ್ನು ಒಳಗೊಂಡ ಅಹಿಚ್ಛತ್ರ ನಾಟಕದಲ್ಲಿ ಬನವಾಸಿಯ ಅಂದಿನ ರಾಜ ಮಯೂರವರ್ಮನ ಆಹ್ವಾನದ ಮೇರೆಗೆ ಆಗಮಿಸಿದ ಹವ್ಯಕರ ಮೂಲ ಹಾಗೂ ಗುಳೆ ಹೊರಟಾಗ ಅವರನುಭವಿಸುವ ಕಷ್ಟಗಳು, ಅವರ ಆಚರಣೆ, ರಾಜನ ಆಸ್ಥಾನಕ್ಕೆ ಆಗಮಿಸಿದ ಮೇಲೆ ನಡೆಯುವ ಯಜ್ಞ ಯಾಗಾದಿಗಳ ಮಹತ್ವ, ನಿತ್ಯ ಕರ್ಮಾನುಷ್ಠಾನ ಹೀಗೆ ಒಂದೊಂದೇ ಕಥಾಹಂದರಗಳು ವೈವಿಧ್ಯಮವಾಗಿ ಪ್ರದರ್ಶಿಸಲ್ಪಡುತ್ತದೆ.
ಕಿಕ್ಕಿರಿದು ಸೇರಿದ್ದ ರಂಗಭೂಮಿಯ ಅಭಿಮಾನಿಗಳನ್ನು 3 ಗಂಟೆಗಳ ನಾಟಕವು ಬೇರೆಯದೇ ಲೋಕಕ್ಕೆ ಕರೆದೊಯ್ದಿತ್ತು.
ಹವ್ಯಕ ಸಮುದಾಯದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ಸಿವಿಲ್ ಡಿಪ್ಲೋಮಾದಲ್ಲಿ ಸ್ಟೇಟಿಗೆ ಪ್ರಥಮ ಶ್ರೇಣಿ ಪಡೆದ ಸುಗಾವಿ ನಾರಾಯಣ ಭಟ್ ಹಾಗೂ ಸುಯೋಗಾಶ್ರಮದ ಲತಿಕಾ ಭಟ್’ರನ್ನು ಸನ್ಮಾನಿಸುವುದರೊಂದಿಗೆ ನಾಟಕವನ್ನು ಆರಂಭಿಸಲಾಯಿತು ರಂಗಭೂಮಿ ಕಲಾವಿದ ಅನಂತ ಭಟ್ ಹುಳಗೋಳ, ಗಿರಿಧರ್ ಕಬ್ನಳ್ಳಿ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಮತಿ ಶಾಂತಲಾ ನಾಗಪತಿ ಹೆಗಡೆ ಮತ್ತು ಜನಹಿತ ಸೇವಾ ಫೌಂಡೇಶನ್ ಲೋಕೇಶ್ ಹೆಗಡೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು ರೂಪ ಹೆಗಡೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.