ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿ.ಎ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಸಂವಹನ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.
ಶಿರಾಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಚ್.ಎಸ್.ಗುನಗಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ನಿರಂತರ ಪರಿಶ್ರಮದಿಂದ ಸುಲಲಿತವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ,ವಿದ್ಯಾರ್ಥಿಗಳ ಸಂವಹನ ಕೌಶಲ್ಯ
ವೃದ್ಧಿಸಿಕೊಳ್ಳಲು ಪೂರಕ ವಾತಾವರಣವನ್ನು ನಿರ್ಮಿಸಿದ್ದೇವೆ, ಇದನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಕರೆ ನೀಡಿದರು.
ಬಿ.ಎ ವಿಭಾಗದ ಉಪಪ್ರಾಂಶುಪಾಲರಾದ ವಿಶ್ವನಾಥ ಭಟ್ಟ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂವಹನ ಕೌಶಲ್ಯದ ತರಬೇತುದಾರರಾಗಿರುವ ವಿಭಾ ನಾಯಕ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ.ಎ ವಿಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ ಸಂವಹನದ ಕುರಿತ ವಿಶೇಷ ಕಿರು ಹೊತ್ತಿಗೆಯನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮೇಘಾ ನಾಯ್ಕ ನಿರೂಪಿಸಿದರೆ, ವಿದ್ಯಾರ್ಥಿನಿ ಚಂದನಾ ನಾಯ್ಕ ವಂದಿಸಿದರು.