ಶಿರಸಿ : ತಾಲೂಕಾ ಪಂಚಾಯತ ಶಿರಸಿ, ಭೈರುಂಬೆ ಗ್ರಾಮ ಪಂಚಾಯತ ಜೀವೈವಿಧ್ಯ ಸಮೀತಿಗಳು, ಕಂದಾಯ, ಅರಣ್ಯ ಇಲಾಖೆ, ಪುರಾತತ್ವ ಇಲಾಖೆ ಸಹ್ಯಾದ್ರಿ ಪರಂಪರಾ ಪ್ರಾಧಿಕಾರ ಹಾಗೂ ಸೋಂದಾ ಜಾಗೃತ ವೇದಿಕೆ, ವೃಕ್ಷಲಕ್ಷ ಆಂದೋಲನ ಇವರ ಸಹಭಾಗಿತ್ವದಲ್ಲಿ ನಡೆದ ಸೋಂದಾ ಕೋಟೆ ಪಾರಂಪರಿಕ ತಾಣ ಸಂರಕ್ಷಣೆ ಕುರಿತು ಸಮಾಲೋಚನಾ ಸಭೆ ಇತ್ತೀಚೇಗೆ ಸೋಂದಾ ಯಾತ್ರಿ ನಿವಾಸದಲ್ಲಿ ನಡೆಯಿತು.
ಎಲ್ಲ ಇಲಾಖೆ, ಸಂಸ್ಥೆಗಳ ಅಧಿಕಾರಿಗಳು, ಕಾರ್ಯಕರ್ತರು ಸಭೆಗೆ ಮೊದಲು ಸೋಂದಾ ಕೋಟೆ ಪ್ರದೇಶದಲ್ಲಿ ತಿರುಗಾಟ ನಡೆಸಿ, ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ಡಾ.ಶೇಜೇಶ್ವರ ಅವರು ಸೋಂದಾ ಕೋಟೆ ಐತಿಹಾಸಿಕ ಸ್ಮಾರಕಗಳ ಸ್ಥಳದ ಸುತ್ತ 300 ಮೀಟರ್ ವರೆಗೆ ಕಾಯಿದೆ ಪ್ರಕಾರ ಕಡ್ಡಾಯವಾಗಿ ಸಂಪೂರ್ಣ ಸಂರಕ್ಷಣೆ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು. ಪುರಾತತ್ವ ಇಲಾಖೆಯು ರಕ್ಷಣೆ ಸಲುವಾಗಿ ಕಾವಲುಗಾರರ ನೇಮಕ ಮಾಡಲಿದೆ ಎಂದು ತಿಳಿಸಿದರು.
ಶಿರಸಿ ಅರಣ್ಯ ಇಲಾಖೆಯ ಡಿ.ಸಿ.ಎಫ್. ಡಾ.ಅಜ್ಜಯ್ಯ ಅವರು, ಶಾಲ್ಮಲಾ ನದೀ ಪರಿಸರ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸೋಂದಾ ಕೋಟೆ ಅರಣ್ಯ ಸೇರಿದೆ. ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೋಟೆ ಅರಣ್ಯ ರಿಸರ್ವ ಫಾರೆಸ್ಟ ಪಟ್ಟಿಯಲ್ಲಿ ಸೇರಿದೆ ಎಂಬ ಮಾಹಿತಿ ನೀಡಿದರು.
ಗ್ರಾಮಪಂಚಾಯತ ಜೀವವೈವಿಧ್ಯ ಸಮಿತಿ ಮತ್ತು ತಾಲೂಕಾ ಪಂಚಾಯತ ಜೀವವೈವಿಧ್ಯ ಸಮೀತಿ ಕೋಟೆ ಪ್ರದೇಶಕ್ಕೆ ಪಾರಂಪರಿಕ ತಾಣ ಮಾನ್ಯತೆ ನೀಡಿವೆ ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ ದೇವರಾಜ್ ತಿಳಿಸಿದರು.
ಜೀವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ,ಕೋಟೆಗಳು ಇದ್ದಲ್ಲಿ ದೇವರ ಕಾಡುಗಳಿವೆ. ಪುರಾತನ ದೇವಾಲಯಗಳಿವೆ. ಕೆರೆ, ಪುಷ್ಕರಣಿ, ಬಾವಿಗಳಿವೆ. ಸಹಸ್ರಲಿಂಗ, ಜಡೆಕೋಟೆ ಅರಣ್ಯ, ಕುಪ್ಪೆ, ನಗರಕೋಟೆ ಅರಣ್ಯ, ಮುಂತಾದ ಐತಿಹಾಸಿಕ ನಿಸರ್ಗ ತಾಣಗಳಿಗೆ ರಕ್ಷಾ ಕವಚಬೇಕು. ಅದಕ್ಕಾಗಿ ಸಂಘಟಿತ, ಸಂಯೋಜಿತ ಪ್ರಯತ್ನಗಳನ್ನು ನಡೆಸೋಣ ಎಂದರು.
ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಅವರು ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸ್ಮಾರಕ ಸ್ಥಳಗಳ ಬಗ್ಗೆ ಜಾಗೃತಿ ಹೆಚ್ಚಿಸಲು ಸೋಂದಾ ಜಾಗೃತ ವೇದಿಕೆ ಮಾದರಿಯ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಭೈರುಂಬೆ ಗ್ರಾಮ ಪಂಚಾಯತಿಯ ಸದಸ್ಯ ಕಿರಣ ಭಟ್ ಸೋಂದಾ ಕೋಟೆ ಪ್ರವಾಸೋದ್ಯಮ ಕುರಿತಾದ ಮನವಿಯನ್ನು ಪುರಾತತ್ವ ಇಲಾಖೆಗೆ ಸಲ್ಲಿಸಿದರು.
ಕಂದಾಯ ಇಲಾಖೆಯ ದಾಖಲೆಗಳಲ್ಲಿ ಪುರಾತತ್ವ ಇಲಾಖೆಯ ವ್ಯಾಪ್ತಿ ಬಗ್ಗೆ ಹಾಗೂ ಶಾಲ್ಮಲಾ ಸಂರಕ್ಷಿತ ಪ್ರದೇಶ ಮತ್ತು ರಿಸರ್ವ ಅರಣ್ಯದ ಬಗ್ಗೆ ಉಲ್ಲೇಖವಾಗಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಜಾಗೃತ ವೇದಿಕೆಯ ಅಧ್ಯಕ್ಷ ರತ್ನಾಕರ ಬಾಡಲಕೊಪ್ಪ ಹಾಗೂ ಪದಾಧಿಕಾರಿ ಆರ್.ಎನ್. ಉಳ್ಳಿಕೊಪ್ಪ ಸೋಂದಾ ಇತಿಹಾಸ ಸ್ಮಾರಕಗಳ ಬಗ್ಗೆ ವಿವರ ಮಾಹಿತಿ ನೀಡಿದರು. ಇತಿಹಾಸಕಾರ ಲಕ್ಷ್ಮೀಶ್ ಸೋಂದಾ ಕೋಟೆ ಬಗ್ಗೆ ಪ್ರತ್ಯೇಕ ಮಾಹಿತಿ ಹೊತ್ತಿಗೆಯನ್ನು ಪಂಚಾಯತ ಪ್ರಕಟಿಸಲು ಮುಂದೆ ಬಂದಿದೆ ಎಂದರು. ಪುರಾತತ್ವ ಕಾಯಿದೆ ಜಾರಿಗೆ ಮುಂದಾಗಬೇಕು ಎಂದರು.
ಅರಣ್ಯ ಕಾಲೇಜು ಪ್ರಾಧ್ಯಾಪಕರಾದ ಡಾ.ವಿನಾಯಕ ಉಪಾಧ್ಯ ಹಾಗೂ ಪ್ರೊ. ಯಶಸ್ವಿನಿ ಶರ್ಮಾ ಅವರು ಕೋಟೆ ಅರಣ್ಯ ವೈವಿಧ್ಯದ ಅಭ್ಯಾಸ ನಡೆಸಲಿದ್ದೇವೆ ಎಂದು ಪ್ರಕಟಿಸಿದರು. ಭೈರುಂಬೆ ಪಂಚಾಯತ ಪಿಡಿಓ ಶಿಗ್ಗಾವಿ, ಹುಲೇಕಲ್ ವಲಯ ಅರಣ್ಯ ಅಧಿಕಾರಿ, ಉಪ ಸ್ಥಳೀಯ ಕಂದಾಯ ಅಧಿಕಾರಿ ಅಣ್ಣಪ್ಪ ಮತ್ತು ಸೋಂದಾ ನಾಗರಿಕರು ಪಾಲ್ಗೊಂಡರು.