ಯಲ್ಲಾಪುರ: ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲಿ 2023ರ ಫೆ.22ರಿಂದ 9 ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು.
ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ‘ಯಲ್ಲಾಪುರ ಗ್ರಾಮದೇವಿ ಜಾತ್ರೆ’ ಕೂಡ ಒಂದಾಗಿದ್ದು ಪ್ರತಿ ಮೂರು ವರ್ಷಕ್ಕೊಮ್ಮೆ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಬರುವ ಫೆಬ್ರುವರಿ 22 ರಿಂದ 9 ದಿನಗಳ ಕಾಲ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಾಳಿನ ಅತ್ಯಂತ ಕರೋನ ಸಂಕಷ್ಟ ಎದುರಾಗಿರುವ ಕಾರಣಕ್ಕಾಗಿ ಜಾತ್ರೆಯನ್ನು ನಿಗದಿತ ಸಮಯಕ್ಕೆ ಮಾಡಲಾಗದೆ ಮುಂದೆ ಹಾಕಲಾಗಿತ್ತು. ಇದೀಗ ಕೊರೋನಾ ಸೋಂಕು ಹರಡುವುದು ಕಡಿಮೆಯಾಗಿದ್ದು, ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಜನವರಿ 31, ಫೆಬ್ರವರಿ 7 ಮತ್ತು 14ರಂದು ಮೂರು ಮಂಗಳವಾರ (ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಗೆ ಉಳಿಯುವ ಪದ್ಧತಿ) ಆಚರಿಸಲು ನಿರ್ಧರಿಸಲಾಯಿತು. ಇದರೊಂದಿಗೆ ಜಾತ್ರೆಯ ರೂಪುರೇಷೆಗಳು, ಸಿದ್ಧತೆಗಳು ಹಾಗೂ ಇನ್ನಿತರ ವಿಚಾರಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು. ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ಜಗನ್ನಾಥ ರೇವಣಕರ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಬೆಳಕು ಚೆಲ್ಲಿದರು. ದೇವಸ್ಥಾನ ಆಡಳಿತ ಮಂಡಳಿ ವಿಸ್ತರಿಸಬೇಕಿದ್ದು ನೂತನ ಮಂಡಳಿ ರಚನೆಯಾಗಬೇಕಿದೆ. ಊರ ದೇವಿಯ ಜಾತ್ರೆಯಾಗಿರುವುದರಿಂದ ಕೆಲಸ ಕಾರ್ಯದ ಒತ್ತಡ ನಿಭಾಯಿಸಲು ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಿದೆ. ದೇವಸ್ಥಾನದ ಆವಾರದಲ್ಲಿ ಮುಖ್ಯವಾಗಿ ಶೌಚಾಲಯದ ವ್ಯವಸ್ಥೆಯಾಗಬೇಕಿದ್ದು ಅನ್ನ ಸಂತರ್ಪಣೆ, ವಿಶೇಷ ಪೂಜಾ ಕಾರ್ಯಗಳ ಸಂದರ್ಭದಲ್ಲಿ ಮಹಿಳೆಯರು, ಹಿರಿಯರು ಮತ್ತು ಮಕ್ಕಳಿಗೆ ಶೌಚ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.
ಗ್ರಾಮದೇವಿಯ ಜಾತ್ರೆಯ ವಿಶೇಷತೆಗಳಲ್ಲಿ ಒಂದಾದ ಹೊರಬೀಡಿನ ಆಚರಣೆ ಅತ್ಯಂತ ಶಾಂತಯುತವಾಗಿ ಸದ್ದುಗದ್ದಲವಿಲ್ಲದೇ ಆಚರಿಸಬೇಕಿದೆ. ಈ ದಿಸೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದಲೇ ಸೂಚನೆ ಹೊರಡಿಸಬೇಕಿದೆ. ಇಲ್ಲವಾದಲ್ಲಿ ಅಂತಹ ಆಚರಣೆಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು. ಗ್ರಾಮದೇವಿ ಜಾತ್ರೆಯು ಅತ್ಯಂತ ವಿಶೇಷತೆಯನ್ನು ಪಡೆದಿದ್ದು, ದೇಶ ವಿದೇಶಗಳಿಗೂ ಆಚರಣೆಯ ವಿಶೇಷತೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ಜರುಗಬೇಕಿದೆ ಎಂದು ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಕಮಿಟಿಯ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಜಾತ್ರೆಯನ್ನು ಶಿಸ್ತು ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸಬೇಕಿದೆ. ದೇವಸ್ಥಾನದ ಹೆಸರಿನಲ್ಲಿ ಯಾವುದೇ ದೇಣಿಗೆ ಸಂಗ್ರಹಿಸಿ ಅನ್ನ ಸಂತರ್ಪಣೆ ಮಾಡುವುದನ್ನು ಕಮಿಟಿ ಒಪ್ಪುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ದೇವಸ್ಥಾನ ಆಡಳಿತ ಮಂಡಳಿಯ ನೂತನವಾಗಿ ಆಡಳಿತ ಮಂಡಳಿ ರಚಿಸಲು ಅಥವಾ ಸದಸ್ಯರ ಸಂಖ್ಯೆ ಹೆಚ್ಚಿಸಲು ಸಾಧ್ಯವಿಲ್ಲವಾಗಿದೆ. ಜಾತ್ರಾ ಮಂಟಪವನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಬೇಕಿದ್ದು, ಅದನ್ನು ನೋಡುವ ಸಲುವಾಗಿ ಬರುವಂತಹ ಭಕ್ತಾದಿಗಳಿದ್ದಾರೆ.
ಇನ್ನಿತರ ವಿಚಾರಗಳ ಚರ್ಚೆಗಳೊಂದಿಗೆ ಸಭೆ ಮುಕ್ತಾಯವಾಯಿತು. ಹಿರಿಯರಾದ ನಾಗೇಶ ಭಾಗ್ವತ, ಮನೋಹರ ಹೆಗಡೆ, ನಾರಾಯಣ ಭಟ್ಟ, ಉದ್ಯಮಿಗಳಾದ ಬಾಲಕೃಷ್ಣ ನಾಯಕ, ಪ.ಪಂ ಮಾಜಿ ಅಧ್ಯಕ್ಷ ಶಿರೀಶ ಪ್ರಭು, ನಂದನ ಬಾಳಗಿ, ಸುಬ್ರಹ್ಮಣ್ಯ ಭಟ್ಟ ಕೊಂಕಣಕೊಪ್ಪ, ಅರ್ಚಕರಾದ ಪರಶುರಾಮ ಆಚಾರಿ, ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ಬದ್ದಿ, ಪ್ರಮುಖರಾದ ಮಾಧವ ನಾಯಕ, ಅರುಣ ಬಿಕ್ಕು ಗುಡಿಗಾರ, ಪ.ಪಂ ಸದಸ್ಯರಾದ ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ, ಪುಷ್ಪಾ ನಾಯ್ಕ, ಸುಧೀರ ಕೊಡ್ಕಣಿ, ವಿವಿಧ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಾತ್ರೆ ಆಚರಣೆಯ ಪ್ರಮುಖರು ಉಪಸ್ಥಿತರಿದ್ದರು.