ಭಟ್ಕಳ: ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಸೈನ್ಸ್ (ಎಂಎಸ್ಸಿ)ನಲ್ಲಿ ವ್ಯಾಸಂಗ ಮಾಡುತ್ತಿರುವ ಇಲ್ಲಿನ ಮುಹಮ್ಮದ್ ಅಮೀನ್ ಬೆಳಕೆಯವರ ಅತ್ಯುತ್ತಮ ಸಾಧನೆಗಾಗಿ ವೆಸ್ಟ್ ಸ್ಕಾಟ್ಲೆಂಡ್ ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರದೊಂದಿಗೆ ಚಿನ್ನದ ಪದಕ ನೀಡಿ ಗೌರವಿಸಿದೆ.
ಶಿರೂರಿನ ಗ್ರೀನ್ ವ್ಯಾಲಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಗಳೂರಿನ ಶ್ರೀನಿವಾಸ್ ಕಾಲೇಜ್ ಆಫ್ ಇಂಜಿನೀಯರಿ0ಗ್ನಲ್ಲಿ ನ್ಯಾನೋಚಿಪ್ ಟೆಕ್ನೊಲೋಜಿಯಲ್ಲಿ ಪದವಿ ಪಡೆದು ಉನ್ನತ ವ್ಯಾಸಂಗಕ್ಕಾಗಿ ಲಂಡನ್ ತೆರಳಿ ವೆಸ್ಟ್ ಸ್ಕಾಟ್ಲೆಂಡ್ ವಿಶ್ವವಿದ್ಯಾಲಯದಲ್ಲಿ ‘ಥಿನ್ ಫಿಲ್ಮ್ ಟೆಕ್ನಾಲಜಿ’ಯಲ್ಲಿ ಎಂಎಸ್ಸಿ ಪದವಿ ಪಡೆದುಕೊಂಡಿದ್ದಾರೆ.
ಇಲ್ಲಿನ ಡೊಂಗರಪಳ್ಳಿ ನಿವಾಸಿ ಯೂನಸ್ ಬೆಳ್ಕೆ ಅವರ ಪುತ್ರರಾಗಿರುವ ಮುಹಮ್ಮದ್ ಅಮೀನ್, ಲಂಡನ್ ತಲುಪಿ ಉನ್ನತ ಶಿಕ್ಷಣದಲ್ಲಿ ಗಣನೀಯ ಸಾಧನೆ ಮಾಡಿ ರಾಷ್ಟ್ರದ ಹೆಸರನ್ನು ಬೆಳಗಿಸುತ್ತಿರುವುದಕ್ಕೆ ಭಟ್ಕಳದ ವಿವಿಧ ಸಂಘ- ಸಂಸ್ಥೆಗಳು, ಶಿಕ್ಷಣ ಸಂಸ್ಥೆಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಶಿರೂರಿನ ಗ್ರೀನ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್ನ ಉಪಾಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಮೊಹಮ್ಮದ್ ಮೀರಾನ್ ಮನೆಗಾರ್, ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮುಝಮಿಲ್ ಕಾಜಿಯಾ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅತೀಕುರ್ ರೆಹಮಾನ್ ಅಭಿನಂದಿಸಿ ಶುಭ ಹಾರೈಸಿದ್ದಾರೆ.