ಗೋಕರ್ಣ: ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಅಭಿಪ್ರಾಯಪಟ್ಟರು.
ವಿವಿವಿಯ ಪರಂಪರಾ ಗುರುಕುಲ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಕೃತ ಸಂಭಾಷಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ. ಯಾವ ಭಾಷೆಯೂ ಕಠಿಣವಲ್ಲ. ಸಂಸ್ಕೃತವಂತು ಎಲ್ಲರಿಗೂ ಆಪ್ತವಾಗುವ ಭಾಷೆ. ನಾವೆಲ್ಲರೂ ಸೇರಿ ಇದನ್ನು ಉಳಿಸಿ ಬೆಳೆಸಲು ಪ್ರಯತ್ನ ಮಾಡೋಣ ಎಂದು ಹೇಳಿದರು.
ಪರಂಪರಾ ಗುರುಕುಲದ ಪ್ರಾಂಶುಪಾಲ ನರಸಿಂಹ ಭಟ್ಟ ಅವರು, ಸಂಸ್ಕೃತ ಭಾಷೆಯ ಮಹತ್ವ ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಸಂಸ್ಕೃತ ದೇವ ಭಾಷೆ; ಅದನ್ನು ಗುರುಕುಲದಲ್ಲಿ ಅಳವಡಿಸುವ ಉದ್ದೇಶ ಶ್ರೀಸಂಸ್ಥಾದವರದ್ದು. ಇದನ್ನು ಈಡೇರುವ ಹೊಣೆ ಗುರುಕುಲದ ವಿದ್ಯಾರ್ಥಿಗಳದ್ದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಂಜುನಾಥ ಭಟ್ಟ ಅವರು ಸಂಸ್ಕೃತ ಪರಿಶುದ್ಧವಾದ ಭಾಷೆಯಾಗಿದೆ. ಇದರ ಸತ್ವ- ಸಾರವನ್ನು ವಿದ್ಯಾರ್ಥಿಗಳು ಅರಿತುಕೊಂಡು ಭಾಷೆಯಲ್ಲಿ ಪ್ರೌಢಿಮೆ ಸಾಧಿಸಬೇಕು ಎಂದು ಕರೆ ನೀಡಿದರು.
ಪರಂಪರಾ ಗುರುಕುಲದ ಪ್ರಾಂಶುಪಾಲ ನರಸಿಂಹ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ ಸ್ವಾಗತಿಸಿ, ವಂದಿಸಿದರು. ಶಂಖನಾದ, ಗುರುವಂದನೆ, ವಿದ್ಯಾರ್ಥಿಗಳಾದ ಸಂಪತ್ ಮತ್ತು ಚಿರಂತನ್ ಅವರಿಂದ ಮಂತ್ರಗೋಷ್ಠಿ, ದೀಪ ಪ್ರಜ್ವಲನ ನೆರವೇರಿತು. ವಾಣಿಶ್ರೀ ಆರ್ಯೆ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಕೃತ ಶಿಬಿರ ಗೀತೆಗಳನ್ನು ಮಕ್ಕಳಿಗೆ ಹೇಳಿಕೊಡಲಾಯಿತು ಮತ್ತು ಸಂಸ್ಕೃತ ಅಕ್ಷರಗಳನ್ನು ಪರಿಚಯಿಸಲಾಯಿತು. ಬಾಲಕೃಷ್ಣ ಭಟ್ಟ, ಡಿ.ಡಿ.ಶರ್ಮ, ಶ್ರೀಪಾದ ಭಟ್ಟ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಗುರುಕುಲಗಳ ಆರ್ಯ- ಆರ್ಯೆಯರು ಉಪಸ್ಥಿತರಿದ್ದರು.