ದಾಂಡೇಲಿ: ನಗರದ ಸಮೀಪದಲ್ಲಿರುವ ಮೌಳಂಗಿ ಹತ್ತಿರದ ಹೊಸ ಕೊಣಪದಲ್ಲಿ ಮೊಸಳೆಯ ಹಾವಳಿಯಿಂದ ಸ್ಥಳೀಯ ಜನತೆ ತೀವ್ರ ಆತಂಕದಲ್ಲಿದ್ದು, ಇದನ್ನು ನಿಯಂತ್ರಿಸುವ0ತೆ ಸ್ಥಳೀಯರು ಹಾಗೂ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಮೊಸಳೆಯನ್ನು ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಗತ್ಯ ಕ್ರಮದೊಂದಿಗೆ ಹೊಸಕೊಣಪಕ್ಕೆ ಭೇಟಿ ನೀಡಿ, ಬಹುದಿನಗಳ ಸ್ಥಳೀಯರ ಸಮಸ್ಯೆಗೆ ಇತಿಶ್ರೀಯನ್ನು ಹಾಡಿತು.
ಮೊಸಳೆಯನ್ನು ಹಿಡಿಯುವ ನುರಿತ ತಂಡವಾದ ಆಗುಂಬೆಯಿ0ದ ಬಂದಿದ್ದ ರಕ್ಷಣಾ ತಂಡದ ಕಾರ್ಯಾಚರಣೆಯ ಮೂಲಕ ಹೊಸ ಕೊಣಪದ ನಾಲಾದಲ್ಲಿದ್ದ ಮೊಸಳೆಯನ್ನು ಸೆರೆ ಹಿಡಿಯಲಾಯಿತು. ಮೊಸಳೆಯನ್ನು ಸೆರೆ ಹಿಡಿಯುವ ಮುನ್ನ ನಾಲಾದಲ್ಲಿ ಭರ್ತಿಯಾಗಿದ್ದ ನೀರನ್ನು ಪಂಪ್ ಮೂಲಕ ಖಾಲಿ ಮಾಡಿಸಲಾಯಿತು. ಆನಂತರ ಸುರಕ್ಷಿತವಾಗಿ ರಕ್ಷಣಾ ತಂಡ ಮೊಸಳೆಯನ್ನು ಹಿಡಿಯಿತು. ಸ್ಥಳೀಯ ಗ್ರಾಮಸ್ಥರ ಪ್ರಕಾರ ಇನ್ನೂ ಒಂದೆರಡು ಮೊಸಳೆಗಳಿವೆ ಎನ್ನುವ ಮಾಹಿತಿಯಡಿಯಲ್ಲಿ ಉಳಿದ ಮೊಸಳೆಗಳನ್ನು ಹುಡುಕಾಡುವ ಕಾರ್ಯ ಬಹಳಷ್ಟು ಹೊತ್ತು ನಡೆಯಿತಾದರೂ ಮೊಸಳೆಗಳ ಯಾವುದೇ ಸುಳಿವು ದೊರೆತಿಲ್ಲ.
ಸ್ಥಳದಲ್ಲಿ ಎ.ಸಿ.ಎಫ್ ಜಿ.ಕೆ.ಶೇಠ್, ವಲಯಾರಣ್ಯಾಧಿಕಾರಿಗಳಾದ ಅಪ್ಪಾರಾವ್ ಕಲಶೆಟ್ಟಿ, ಸಂಗಮೇಶ್ ಪಾಟೀಲ್, ಬಸವರಾಜ್.ಎಂ ಹಾಗೂ ದಾಂಡೇಲಿ, ವಿರ್ನೋಳಿ ಅರಣ್ಯ ವಲದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಕ್ಷಣಾ ತಂಡಕ್ಕೆ ಅಗತ್ಯ ಮಾರ್ಗದರ್ಶನದೊಂದಿಗೆ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸುನೀಲ ಕಾಂಬಳೆ, ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಸುರೇಶ ಬಾಬು ಕೇದಾರಿ ಹಾಗೂ ಸ್ಥಳೀಯ ಗ್ರಾಮಸ್ಥರು ಸ್ಥಳದಲ್ಲಿದ್ದು ಸಹಕರಿಸಿದರು.