ಅಂಕೋಲಾ: ಮಂಜಗುಣಿಯ ಗಂಗಾವಳಿ ನದಿಗೆ ಹೊಂದಿಕೊಂಡಿರುವ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ನಾಲ್ಕುವರೆ ಕೋಟಿ ರೂ. ಹಣ ಚಿಕ್ಕ ನೀರಾವರಿ ಇಲಾಖೆಯಿಂದ ಮಂಜೂರಿಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಮಂಗಳವಾರ ಗುತ್ತಿಗೆ ಪಡೆದ ಕಂಪನಿಯು ಸುರಕ್ಷಿತ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.
ಈ ರಸ್ತೆಯು ಗಂಗಾವಳಿ ನದಿಗೆ ಹೊಂದಿಕೊಂಡಿದ್ದರೂ ಕೂಡ ಸಮೀಪದಲ್ಲಿಯೇ ಸಮುದ್ರ ಇರುವುದರಿಂದ ಮಳೆಗಾಲದಲ್ಲಿ ಕಡಲಬ್ಬರ ಉಂಟಾಗಿ ತಡೆಗೋಡೆಗಳು ನೀರುಪಾಲಾಗುತ್ತಿದ್ದವು. ಇದರಿಂದ ಪದೇ ಪದೇ ತಡೆಗೋಡೆ ನಿರ್ಮಿಸಿದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯರು ಚಿಕ್ಕ ನೀರಾವರಿ ಇಲಾಖೆ ಮತ್ತು ಶಾಸಕಿ, ಸಚಿವರಿಗೆ ಮನವಿ ಸಲ್ಲಿಸುತ್ತ ಬಂದಿದ್ದರು.
850 ಮೀ. ಉದ್ದದ ಈ ತಡೆಗೋಡೆಯನ್ನು ಪೂರ್ಣವಾಗಿ ಕಾಂಕ್ರೇಟ್ ಮೂಲಕ ತಡೆಗೋಡೆ ನಿರ್ಮಾಣಗೊಳ್ಳಲಿದೆ. ಇದರಿಂದಾಗಿ ರಸ್ತೆ ಅಗಲೀಕರಣ ಆಗುವುದರೊಂದಿಗೆ ಶಾಶ್ವತ ತಡೆಗೋಡೆ ನಿರ್ಮಾಣಗೊಳ್ಳಲಿದೆ. ಕಾಮಗಾರಿ ಆರಂಭಗೊಂಡ ಐದರಿಂದ ಆರು ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದು ಗುತ್ತಿಗೆದಾರರು ತಿಳಿಸಿದರು.
ಸ್ಥಳೀಯ ಪ್ರಮುಖರಾದ ಕೆ.ಡಿ. ನಾಯ್ಕ, ಬಹು ವರ್ಷದ ನಮ್ಮ ಬೇಡಿಕೆ ಈಗ ಸಾಕಾರಗೊಳ್ಳುತ್ತಿದೆ. ಉತ್ತಮ ಗುಣಮಟ್ಟದಲ್ಲಿ ತಡೆಗೋಡೆ ಕಾಮಗಾರಿ ನಡೆಯಬೇಕು. ಇದಕ್ಕೆ ಸ್ಥಳೀಯರ ಸಹಕಾರವೂ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವೆಂಕಟ್ರಮಣ ಕೆ.ನಾಯ್ಕ, ಪ್ರಮುಖರಾದ ಜೈವಂತ ನಾಯ್ಕ, ಪಾಂಡುರಂಗ ನಾಯ್ಕ, ಸತೀಶ ಈ.ನಾಯ್ಕ, ಮಾರುತಿ ಕೆ.ನಾಯ್ಕ, ಹಮ್ಮು ವಿ.ನಾಯ್ಕ, ಗಣಪತಿ ಎ.ನಾಯ್ಕ, ಗುಲಾಬಿ ನಾಯ್ಕ, ನಾಗರಾಜ ಮಂಜಗುಣಿ, ವಿಠ್ಠಲ ನಾಯ್ಕ, ಸೇತಕುಮಾರ ಆಗೇರ ಇತರರಿದ್ದರು.
ಪ್ರತಿ ವರ್ಷ ಮಳೆಗಾಲದಲ್ಲಿ ಜನರು ಆತಂಕದಿಂದಲೇ ದಿನ ಕಳೆಯುವಂತಾಗಿತ್ತು. ಈಗ ಕಾಂಕ್ರೀಟ್ ತಡೆಗೋಡೆ ಸುಸಜ್ಜಿತವಾಗಿ ನಿರ್ಮಾಣಗೊಂಡರೆ ಕಡಲ ಕೊರೆತ ಪ್ರಮಾಣ ದೂರವಾಗಲಿದೆ. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯಬೇಕು.
• ವೆಂಕಟರಮಣ ಕೆ.ನಾಯ್ಕ, ಗ್ರಾ.ಪಂ. ಸದಸ್ಯ