ದಾಂಡೇಲಿ: ನಗರದ ಅಂಬೇವಾಡಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, 5 ಎಕರೆ ವಿಶಾಲ ಜಾಗದಲ್ಲಿ ಸುಸಜ್ಜಿತವಾದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡ ಜೊತೆಗೆ ಚಾಲನಾ ಟ್ರ್ಯಾಕ್ ಸೇರಿದಂತೆ ಇನ್ನಿತರ ಸೌಲಭ್ಯಗಳ ನಿರ್ಮಾಣವಾಗಲಿದೆ. 1222 ಚದರ ಮೀಟರ್ ವಿಸ್ತೀರ್ಣವನ್ನು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡ ಹೊಂದಲಿದ್ದು, 5 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗಲಿದೆ ಎಂದ ಅವರು, ಇಲ್ಲಿಯೂ ಚಾಲನಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ನೂತನವಾಗಿ ನಿರ್ಮಾಣವಾಗಲಿರುವ ಕಟ್ಟಡ ಗುಣಮಟ್ಟದಿಂದ ಕೂಡಿರಬೇಕೆಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ಈ ಭಾಗದ ಜನತೆಯ ಬಹುವರ್ಷಗಳ ಬೇಡಿಕೆಯಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯನ್ನು 2014ರಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಸಾರಿಗೆ ಇಲಾಖೆಯ ಹೆಚ್ಚುವರಿ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ರೂ.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲು ಟೆಂಡರ್ ಅನುಮೋದಿತವಾಗಿದೆ. ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. ಸಕಲ ಮೂಲಸೌಕರ್ಯವನ್ನು ಕಲ್ಪಿಸಲಾಗುತ್ತದೆ ಎಂದರು. 2014ರಲ್ಲಿ ದಾಂಡೇಲಿಯಲ್ಲಿ ಆರಂಭಗೊಂಡ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಈವರೆಗೆ 60,902 ವಾಹನಗಳು ನೋಂದಣಿಯಾಗಿ ಉಪಯೋಗದಲ್ಲಿದ್ದು, 36,006 ಜನ ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಜಂಟಿ ಸಾರಿಗೆ ಆಯುಕ್ತೆ ಎಂ.ಶೋಭಾ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಾಮಗಾರಿ ಅಭಿಯಂತರ ಪ್ರಕಾಶ ಕಬಾಡಿ, ನಗರಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮೋಹನ ಹಲವಾಯಿ, ಮಹಾದೇವ ಜಮಾದಾರ ಹಾಗೂ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಆರ್.ಎಸ್.ಪವಾರ್ ಉಪಸ್ಥಿತರಿದ್ದರು.
ಡಿಎಫ್ಎ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದ ಕಾರ್ಯಕ್ರಮಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನಪ್ಪ ವಿ.ಕಪ್ಪರದ ಸ್ವಾಗತಿಸಿದರು. ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಖಾಜಿಯವರು ವಂದಿಸಿದರು. ಕನ್ಯಾ ವಿದ್ಯಾಲಯ ಪಿಯು ಕಾಲೇಜಿನ ಪ್ರಾಚಾರ್ಯರಾದ ಹನುಮಂತ ಕುಂಬಾರ ಕಾರ್ಯಕ್ರಮವನ್ನು ನಿರೂಪಿಸಿದರು.
ನೂತನ ಶಾಖಾ ಗ್ರಂಥಾಲಯದ ಉದ್ಘಾಟನೆ
ನಗರದ ಸುಭಾಸನಗರದಲ್ಲಿ ನೂತನವಾಗಿ ನಿರ್ಮಾಣ ಹೊಂಡ ಅಂಬೇವಾಡಿ ಶಾಖೆಯ ಶಾಖಾ ಗ್ರಂಥಾಲಯವನ್ನೂ ಶಾಸಕ ಆರ್.ವಿ.ದೇಶಪಾಂಡೆ ಲೋಕಾರ್ಪಣೆಗೊಳಿಸಿದರು.
ಅತ್ಯುತ್ತಮವಾದ ಮೂಲಸೌಕರ್ಯವನ್ನು ಒದಗಿಸಿಕೊಟ್ಟ ನಗರಸಭೆಯ ಕಾರ್ಯವನ್ನು ಕೊಂಡಾಡಿದ ಅವರು, ಸಾರ್ವಜನಿಕ ಗ್ರಂಥಾಲಯಗಳು ಜ್ಞಾನಭಂಡಾರವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಸ್ಥಳೀಯ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯ ಉಪಯುಕ್ತ ಕೊಡುಗೆ ನೀಡಲೆಂದು ಶುಭ ಹಾರೈಸಿದರು.
ಸಾರ್ವಜನಿಕ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಕೆ.ವಿ.ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನತೆಗೆ ಅನುಕೂಲವಾಗಲೆಂದು ಇನ್ನೂ ಹೆಚ್ಚಿನ ಪುಸ್ತಕಗಳನ್ನು ಈ ಗ್ರಂಥಾಲಯದಲ್ಲಿ ಹೊಂದಿಸಿಕೊಳ್ಳಲಾಗುವುದು. ಗ್ರಂಥಾಲಯ ಸ್ಥಾಪನೆಗೆ ಶಾಸಕರು ಹಾಗೂ ನಗರ ಸಭೆಯವರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಸದಸ್ಯರುಗಳಾದ ಮಜೀದ್ ಸನದಿ, ಯಾಸ್ಮಿನ್ ಕಿತ್ತೂರು, ಮೋಹನ ಹಲವಾಯಿ, ಮಹಾದೇವ ಜಮಾದಾರ ಹಾಗೂ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ವಿ.ಆರ್.ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕರಾದ ಶಿವಪ್ಪ ಜಿ.ಗುಡಗುಡಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸಹಾಯಕ ಗ್ರಂಥಪಾಲಕಿ ರೇಣುಕಾ ಬೆಳ್ಳಿಕಟ್ಟಿ ವಂದಿಸಿದರು.