ಕಾರವಾರ: 2022- 23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಂಟು ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸರ್ಕಾರದ ಆದೇಶದಂತೆ 2022-23 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷಾ ಮತ್ತು ಎಂ4 ಭತ್ತವನ್ನು ಖರೀದಿಸಲು ಹಾಗೂ ಖರೀದಿಸಲಾದ ಭತ್ತವನ್ನು ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಮುಂಡಗೋಡ, ಹಳಿಯಾಳ, ಜೊಯಿಡಾ ಹಾಗೂ ಕುಮಟಾ ತಾಲ್ಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಗುರುವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಿರಸಿಯ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆ, ಮುಂಡಗೋಡ, ಕುಮಟಾ, ಹೊನ್ನಾವರದ ಎಪಿಎಂಸಿ ಯಾರ್ಡ್ ಕೆಎಫ್‌ಸಿಎಸ್‌ಸಿ ಅಕ್ಷರದಾಸೋಹ ಮಳಿಗೆ, ಹಳಿಯಾಳ ಎಪಿಎಂಸಿ ಯಾರ್ಡ್ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆ, ಜೊಯಿಡಾ ಕೆಎಫ್‌ಸಿಎಸ್‌ಸಿ ಅಕ್ಷರದಾಸೋಹ ಮಳಿಗೆ, ಅಂಕೋಲಾ ಎಪಿಎಂಸಿ ಉಪಮಾರುಕಟ್ಟೆಯ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆ, ಭಟ್ಕಳದ ಪಂಚಾಯತರಾಜ್ ಕಟ್ಟಡದಲ್ಲಿರುವ ಕೆಎಫ್‌ಸಿಎಸ್‌ಸಿ ಅಕ್ಷರದಾಸೋಹ ಮಳಿಗೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರವು ಪ್ರತಿ ಕ್ವಿಂಟಾಲ್ ಭತ್ತಕ್ಕೆ (ಸಾಮಾನ್ಯ) ರೂ.2040 ಮತ್ತು (ಗ್ರೇಡ್-ಎ) ರೂ.2060 ದರ ನಿಗದಿಪಡಿಸಿದೆ. ಸ್ಥಳೀಯ ತಳಿಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷಾ ಮತ್ತು ಎಂ4 ಭತ್ತವನ್ನು ಮಾತ್ರ ಕೇಂದ್ರಗಳಲ್ಲಿ ಖರೀದಿಸಲಾಗುತ್ತದೆ. ಸ್ಥಳೀಯ ತಳಿಗಳ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ರೂ.500ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಕೃಷಿ ಇಲಾಖೆ ಜಾರಿಗೊಳಿಸಿರುವ ‘ಪ್ರೂಟ್ಸ್’ ದತ್ತಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ಮಾತ್ರ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
‘ಪ್ರೂಟ್ಸ್’ ದತ್ತಾಂಶದಲ್ಲಿ ನೋಂದಣಿ ಮಾಡಿಸಲು ರೈತರು ಪಹಣಿ ಪತ್ರ, ಆಧಾರ್ (ಪ್ರತಿ), ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ಬ್ಯಾಂಕಿನ ವ್ಯವಸ್ಥಾಪಕರು ದೃಢೀಕರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕದ ಪ್ರತಿ ಮತ್ತು ಬೆಳೆ ದೃಢೀಕರಣ ಪತ್ರಗಳನ್ನು ಹಾಜರುಪಡಿಸಿ ಸಂಬಂಧಿಸಿದ ತಾಲ್ಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಖರೀದಿ ಕೇಂದ್ರಗಳಲ್ಲೂ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ‘ಪ್ರೂಟ್ಸ್’ ನೋಂದಾಯಿತ ಸಂಖ್ಯೆಯೊಂದಿಗೆ ಈ ಕೇಂದ್ರಗಳಲ್ಲಿ ನೋಂದಾಯಿಸಿದ ರೈತರಿಂದ ಮಾತ್ರ ಭತ್ತ ಖರೀದಿಸಲಾಗುತ್ತದೆ. ಭತ್ತವನ್ನು ರೈತರಿಂದ ಖರೀದಿಸಿದ ನಂತರ ಖರೀದಿ ಏಜೆನ್ಸಿಗಳಿಂದ ಭತ್ತವನ್ನು ಸರಬರಾಜು ಮಾಡಿದ ರೈತರಿಗೆ ಡಿಬಿಟಿ ಮೂಲಕ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೂಚನೆ
• ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ (1 ಎಕರೆಗೆ 16 ಕ್ವಿಂಟಲ್) ಭತ್ತ ಮಾತ್ರ ಖರೀದಿ ಮಾಡಲಾಗುತ್ತದೆ
• ನ.21ರಿಂದ ಡಿ.21ರವರೆಗೆ ರೈತ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ
• ಡಿ.01ರಿಂದ 2023ರ ಫೆ.28ರವರೆಗೆ ಭತ್ತ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ
• ಭತ್ತ ಖರೀದಿಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ದೂರವಾಣಿ ಸಂ: 08382226243, 9448496026