ಯಲ್ಲಾಪುರ : ಸಮಾಜದಲ್ಲಿ ಶಾಂತಿ ನೆಲೆಗೊಳ್ಳಬೇಕು. ಮಾನವೀಯತೆಯ ಕಾಳಜಿ ಇದ್ದಲ್ಲಿ ನ್ಯಾಯಪರವಾದ ನೆಮ್ಮದಿಯ ವಾತಾವರಣ ನಿರ್ಮಾಣವಾಗಬಲ್ಲದು. ಅಸಹಾಯಕರಿಗೆ ಕಾನೂನಿನ ನೆರವು ಸಿಗಬೇಕು. ಜನಸಾಮಾನ್ಯರು ಕಾನೂನಿನ ಸಮಸ್ಯೆಗೆ ಸಿಲುಕದ ಹಾಗೆ ತಿಳುವಳಿಕೆಯನ್ನು ನೀಡುವುದು ಈ ಅಭಿಯಾನದ ಉದ್ದೇಶ. ಎಂದು ಯಲ್ಲಾಪುರದ ಸಿವಿಲ್ ನ್ಯಾಯಾಧೀಶರಾದ ಜಿ ಬಿ ಹಳ್ಳಾಕಾಯಿ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಸಭಾಭವನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವಿನ ಅಭಿಯಾನದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ಬಾಯಿ ಪಾಟೀಲ್ ಮಾತನಾಡಿ, ಕಾನೂನಿನ ತಿಳುವಳಿಕೆ ನಮ್ಮೆಲ್ಲರನ್ನು ರಕ್ಷಿಸಲು ಸಹಕಾರಿಯಾಗಿದೆ. ನಮ್ಮ ನಾಗರಿಕ ಕಾನೂನು ಅರಿವು ಹೊಂದುವುದು ನಮ್ಮ ಜವಾಬ್ದಾರಿಯಾಗಿದೆ. ನಾಗರಿಕರ ಸಬಲೀಕರಣ ಅವಶ್ಯ ಎಂದರು.
ಕಾನೂನಿನ ಕುರಿತು ಉಪನ್ಯಾಸ ನೀಡಿದ ನ್ಯಾಯವಾದಿ ಎನ್ ಟಿ ಗಾಂವ್ಕರ್, ಕಾನೂನಿನ ಜ್ಞಾನದ ಕೊರತೆಯಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಜಗತ್ತಿನ ಅಂಕಿ ಅಂಶ ದಾಖಲಾತಿಯ ಮಹತ್ವವು ನಮಗೆ ಕಾನೂನಿನ ತಿಳುವಳಿಕೆಯಿಂದ ಸಿಗಲು ಸಾಧ್ಯ.
ನಾವು ಮುಂಜಾಗ್ರತೆವಹಿಸಿ ಕಾನೂನಿನ ಪ್ರಕಾರ ನಡೆದುಕೊಂಡರೆ ನಮ್ಮ ನಿತ್ಯದ ವ್ಯವಹಾರಿಕ ಜೀವನ ಸುಖಮಯವಾಗಬಲ್ಲದು ಎಂದರು .
ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಭಟ್ಟ ಮಾತನಾಡಿ, ಹಳ್ಳಿಯ ಮೂಲೆ ಮೂಲೆಗೂ ಕಾನೂನಿನ ಅರಿವಿನ ಕಾರ್ಯಕ್ರಮ ತಲುಪಿದೆ. ಸಂವಿಧಾನ ಗೌರವಿಸುವ ಕೆಲಸವಾಗಬೇಕು. ನಾಗರಿಕರ ಗೌರವ ಜೀವನ ಮುಖ್ಯ ಎಂದರು.
ಸಭೆಯಲ್ಲಿ ನ್ಯಾಯವಾದಿ ಸರಸ್ವತಿ ಜಿ ಭಟ್ಟ , ಗ್ರಾ.ಪಂ ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಗ್ರಾ.ಪಂ ಸದಸ್ಯರು , ವಜ್ರಳ್ಳಿಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗ್ರಾ.ಪಂ ಅಧ್ಯಕ್ಷೆ ವೀಣಾ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಗಾಂವ್ಕರ್ ಪ್ರಾರ್ಥಿಸಿದರು. ಪಿಡಿಓ ಸಂತೋಷಿ ಬಂಟ್ ಸ್ವಾಗತಿಸಿದರು. ರಾಜ್ಯ ಪ್ರಶಸ್ತಿ ಶಿಕ್ಷಕ ಸುಧಾಕರ ನಾಯಕ ನಿರೂಪಿಸಿದರು. ಗ್ರಾಮ ಪಂಚಾಯತ ಸದಸ್ಯರಾದ ಗಜಾನನ ಭಟ್ಟ, ಕಳಚೆ ಕೊನೆಯಲ್ಲಿ ವಂದಿಸಿದರು.