ಕುಮಟಾ: ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದಿಂದ ಪಟ್ಟಣದ ಗಿಬ್ ಸರ್ಕಲ್ ಸಮೀಪದ ಲಕ್ಷ್ಮೀಬಾಯಿ ಬುರ್ಡೇಕರ್ ಸಭಾಭವನದ ಆವರಣದಲ್ಲಿ ಮಾನವಂತರ ಮನೆ ಎಂಬ ಸಾಮಾಜಿಕ ಕಾಮಿಡಿ ನಾಟಕ ನ.11ರ ಸಂಜೆ 6 ಘಂಟೆಯಿಂದ ಪ್ರಾರಂಭವಾಗಲಿದೆ ಎಂದು ಶಾಂತಿಕಾ ಕಲಾ ರಂಗದ ಅಧ್ಯಕ್ಷ ಶ್ರೀಧರ ನಾಯ್ಕ ವಕ್ಕನಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂಟ್ಯೂಬ್ ಚಾನೆಲ್‌ನಲ್ಲಿ 5 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಹೌದ ಹುಲಿಯಾ ನಾಟಕ ಖ್ಯಾತಿಯ ಕಲಾ ತಂಡದವರಿಂದ ಕಲಾಕೇಸರಿ ಮಹೇಶ ಕಲ್ಲೋಳ ವಿರಚಿತ ಮಾನವಂತರ ಮನೆ ನಾಟಕವನ್ನು ನ.11 ರಂದು ಸಂಜೆ 5.30 ಘಂಟೆಗೆ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ ವಿವೇಕ ಶೇಣ್ವಿ, ಸಿ.ಪಿ.ಐ ತಿಮ್ಮಪ್ಪ ನಾಯ್ಕ, ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪುರಸಭಾ ಮುಖ್ಯಧಿಕಾರಿ ಅಜಯ ಭಂಡಾರರ್ಕರ್, ಗಿಬ್ ಹೈಸ್ಕೂಲ್ ಅಧ್ಯಕ್ಷ ವಾಸುದೇವ ಪ್ರಭು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮೂರನೆ ಬಾರಿ ನಾಟಕ ತಂಡ ಆಗಮಿಸಿದೆ. ಎರಡೂ ಬಾರಿಯೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವೀಕ್ಷಣೆ ಮಾಡಿದ್ದರು. ಹಾಸ್ಯ, ದುರಂತ, ಪ್ರೇಮ, ಪ್ರೀತಿ, ಸಂಸ್ಕಾರ, ಸುಖ-ದುಃಖಗಳ ಸನ್ನಿವೇಶಗಳನ್ನೊಳಗೊಂಡ ಸಾಮಾಜಿಕ ಕಥಾನಕ ಈ ನಾಟಕ ಒಳಗೊಂಡಿದೆ. ಮಕ್ಕಳಿಗೆ ತಂದೆ-ತಾಯಿ ಮೇಲಿನ ಕಾಳಜಿ, ಮಕ್ಕಳ ಮೇಲೆ ಪಾಲಕರ ಕಾಳಜಿ, ಸಮಾಜದ ಅಂಕು-ಡೊಂಕು ಸೇರಿದಂತೆ ಮತ್ತಿತರ ಸನ್ನಿವೇಶಗಳು ನಾಟಕದಲ್ಲಿ ಅಡಗಿದೆ. ಸಾರ್ವಜನಿಕರು ಕುಟುಂಬ ಸಮೇತ ಆಗಮಿಸಿ, ನಾಟಕ ವೀಕ್ಷಿಸಿ, ನಾಟಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ನಾಟ್ಯ ಸಂಘದ ದಾವಲ ತಾಳಿಕೋಟೆ ಮಾತನಾಡಿ, ಮಾನವಂತರ ಮನೆ ಎಂಬ ನಾಟಕವನ್ನು ಕುಟುಂಬ ಸಮೇತವಾಗಿ ನೋಡಬಹುದಾಗಿದ್ದು, ನುರಿತ ಹಾಗೂ ಯುವ ಕಲಾವಿದರಿರುವ ನಾಟ್ಯ ಸಂಘಕ್ಕೆ ಜಿಲ್ಲೆಯ ಜನತೆ ಪ್ರೋತ್ಸಾಹ ನೀಡಬೇಕು. ಪ್ರತಿ ದಿನ ಸಂಜೆ 6 ಘಂಟೆ ಮತ್ತು ರಾತ್ರಿ 9 ಘಂಟೆಗೆ ಪ್ರತಿ ದಿನ ಎರಡು ಪ್ರದರ್ಶನ ನಡೆಯಲಿದೆ ಎಂದರು.
ನಾಟಕದ ಖ್ಯಾತ ಕಲಾವಿದರಾದ ಸಂಕೇತ ಮಂಗಳೂರು, ರಿಯಾಜ್ ಕರ್ಜಗಿ, ಫಯಾಜ ಕರ್ಜಗಿ, ಶರತ ಕುಂಬ್ಳೆ, ಕನಕಲಕ್ಷ್ಮಿ, ಹಾಸ್ಯದಲ್ಲಿ ಮೇಘನಾ ದಾವಣಗೆರೆ ಸೇರಿದಂತೆ ಇನ್ನಿತರ ನುರಿತ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದರು.
ಗಣೇಶ ಭಟ್ಟ ಬಗ್ಗೋಣ ಮಾತನಾಡಿ, ಮಾನವಂತರ ಮನೆ ನಾಟಕವನ್ನು ಶಾಂತಿಕಾ ಕಲಾ ತಂಡದ ಸದಸ್ಯರು ವೀಕ್ಷಣೆ ಮಾಡಿ, ಕುಮಟಾಕ್ಕೆ ತರಿಸಿದ್ದಾರೆ. ಪ್ರತಿಯೊಂದು ಇಲಾಖೆಯು ಸಹಕಾರ ನೀಡಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜಯಬೇರಿ ಬಾರಿಸಲು ಸಹಕಾರ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ನಾಟಕ ಮಂಡಳಿ ಅಧ್ಯಕ್ಷ ಫಯಾಜ ಕರ್ಜಗಿ, ನಿವೃತ್ತ ಪ್ರಾಂಶುಪಾಲ ಡಾ.ಜಿ.ಎಸ್.ಭಟ್ಟ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ, ಶಾಂತಿಕಾ ಕಲಾ ತಂಡದ ನಾರಾಯಣ ವಾಗೇಕರ, ಅಶೋಕ ಗೌಡ, ವೆಂಕಟರಮಣ ಹೆಗಡೆ, ರಾಮು ಅಡಿ, ಗಣಪತಿ ಹೆಗಡೆ, ರವಿ ನಾಯ್ಕ, ನಾಟಕ ನಿರ್ದೇಶಕ ಮಹೇಶ ಕಲ್ಲೋಳ, ನಾಟ್ಯ ಸಂಘದ ಶರತ ಕುಂಬ್ಳೆ, ಚಂದ್ರು ಮೈಲಾರ, ಮೇಘರಾಜ ಜಾಲಿಹಾಳ ಸೇರಿದಂತೆ ಮತ್ತಿತರರು ಇದ್ದರು.