ಯಲ್ಲಾಪುರ: ಪೌಷ್ಟಿಕ ಆಹಾರ ಸೇವನೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕಾಯಿಲೆಗಳಿಂದ ದೂರ ಇರುವಂತೆ ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಮಧುಸೂದನ ಭಟ್ ಕರೆ ನೀಡಿದರು.
ಅವರು ಮಂಗಳವಾರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಕ್ಷಯರೋಗಿಗಳಿಗೆ ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಉಚಿತ ಪೌಷ್ಟಿಕ ಆಹಾರ ವಿತರಿಸಿ ಮಾತನಾಡಿದರು.
ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾತನಾಡಿ, ಕ್ಷಯ ರೋಗ ನಿರ್ಮೂಲನೆಗೆ ಸಮಾಜದ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ಸಹಾಯ ಸಹಕಾರ ಅವಶ್ಯವಾಗಿದೆ ಎಂದು ಹೇಳಿದರು.
ತಾಲೂಕ ಔಷಧಿ ವ್ಯಾಪಾರಸ್ಥರು ಸಂಘದ ಅಧ್ಯಕ್ಷರಾದ ಸುರೇಶ ಶಾನಭಾಗ್, ಸದಸ್ಯರಾದ ಶಂಕರ ಭಟ್, ಮಾರುತಿ ನಾಯ್ಕ, ಬಸವರಾಜ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹೇಶ ತಾಳಿಕೋಟಿ ಸ್ವಾಗತಿಸಿ, ವಂದಿಸಿದರು. ಎಸ್. ಟಿ ಎಸ್ ರಾಹುಲ್ ಶೇಟ್, ಎಸ್. ಟಿ ಎಲ್.ಎಸ್ ರಮೇಶ, ಬಿಪಿಎಂ ಎಸ್ ಎಸ್ ಪಾಟೀಲ್ ಭಾಗವಹಿಸಿದ್ದರು.