ಹಳಿಯಾಳ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿ 42 ದಿನ ಪೂರೈಸಿ 43ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಪ್ರಾರಂಭಿಸಿ ತಿಂಗಳಾದ್ರೂ ಇನ್ನು ಸರ್ಕಾರ ರೈತರ ಸಮಸ್ಯೆಗೆ ಬಗೆಹರಿಸದೇ ಇರುವುದು ರೈತರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದ್ದು ಬಿಜೆಪಿಗೆ ಇದು ಹಿನ್ನಡೆಯಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.
ಪಟ್ಟಣದಲ್ಲಿನ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸಾಗಿಸದೇ ಕಳೆದ 42 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆಯನ್ನ ಕೊಡುವಂತೆ, 2016-17ರಲ್ಲಿ ಘೋಷಿಸಿದ್ದ ಹೆಚ್ಚುವರಿ ಹಣವನ್ನ ಕಂಪನಿಯವರು ನೀಡುವಂತೆ, ಕಟಾವು ಮತ್ತು ಸಾಗಾಟ ವೆಚ್ಚ ಪರಿಷ್ಕರಣೆ ಮಾಡುವಂತೆ ಸೇರಿ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ರೈತರ ಪ್ರತಿಭಟನೆಗೆ ಸ್ಪಂದಿಸಿದ ಅಧಿಕಾರಿಗಳು ನಂತರ ಪ್ರತಿಭಟನೆಯತ್ತ ಹೆಚ್ಚು ಯಾರು ಆಸಕ್ತಿ ವಹಿಸುತ್ತಿಲ್ಲ ಎನ್ನುವ ಆರೋಪ ಕಳಿ ಬಂದಿದೆ. ಸದ್ಯ ಧಾರವಾಡದ ಶ್ರೀ ಪರಮಾತ್ಮಾಜೀ ಮಹಾರಾಜರ ನೇತೃತ್ವದಲ್ಲಿ ರೈತರು ಪ್ರತಿಭಟನೆಯನ್ನ ನಡೆಸುತ್ತಲೇ ಇದ್ದರು ಸರ್ಕಾರ ಮಾತ್ರ ರೈತರ ಸಮಸ್ಯೆಯನ್ನ ಬಗೆಹರಿಸದೇ ಸುಮ್ಮನಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ಯಾರಿ ಸಕ್ಕರೆ ಕಾರ್ಖಾನೆಗೆ ಹಳಿಯಾಳ, ದಾಂಡೇಲಿ, ಜೋಯಿಡಾ, ತಾಲೂಕಿನಲ್ಲಿಯೇ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬನ್ನ ಬೆಳೆಯುತ್ತಿದ್ದು ಸುಮಾರು ಹತ್ತು ಸಾವಿರಕ್ಕೂ ಅಧಿಕ ರೈತರು ಕಬ್ಬು ಬೆಳೆಯುತ್ತಾರೆ. ಇದಲ್ಲದ ಮುಂಡಗೋಡ, ಧಾರವಾಡ ಜಿಲ್ಲೆಗೆ ಗ್ರಾಮೀಣ ಭಾಗ, ಅಳ್ನಾವರ, ಕಲಘಟಗಿ ಸೇರಿ ಹಲವು ಭಾಗರ ರೈತರು ಬೆಳೆದ ಕಬ್ಬನ್ನ ಬೆಳೆದು ಪ್ಯಾರಿ ಕಾರ್ಖಾನೆಗೆ ಕಳಿಸಿಕೊಡುವ ಕಾರ್ಯ ಮಾಡುತ್ತಾರೆ. ಸಾವಿರಾರು ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು ಸಕ್ಕರೆ ಖಾತೆ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಹೀಗೆ ಆದರೆ ಬೆಳೆದ ಕಬ್ಬು ರೈತರಿಗೆ ಉಪಯೋಗ ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಸರ್ಕಾರಕ್ಕೆ ಯಾಕೆ ಇಷ್ಟೊಂದು ನಿರ್ಲಕ್ಷ ಎನ್ನುವ ಮಾತು ಕೇಳಿ ಬರುತ್ತಿದೆ.
ಸರ್ಕಾರದ ನಡೆಯಿಂದ ಬಿಜೆಪಿಗೆ ಮುಂದಿನ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇದೇ ವಿಚಾರ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಕೇಲವ ಹಳಿಯಾಳ ಕ್ಷೇತ್ರ ಮಾತ್ರವಲ್ಲ, ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸುವ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ವಿರುದ್ಧ ರೈತರು ನಿಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಳಿಯಾಳದಲ್ಲಿ ನವೆಂಬರ್ 9ರಂದು ಬಿಜೆಪಿಯ ಜನಸಂಕಲ್ಪ ಯಾತ್ರೆ ನಡೆಯಲಿದ್ದು ಇದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ ಎನ್ನಲಾಗಿತ್ತು. ಇನ್ನು ಇದೇ ವೇಳೆ ಕಬ್ಬು ಬೆಳಗಾರರು ಸಿಎಂಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನ ತಿಳಿಸಿ ಸಮಸ್ಯೆಯನ್ನ ಸಿಎಂ ಹಳಿಯಾಳಕ್ಕೆ ಆಗಮಿಸಿದ ವೇಳೆಯಲ್ಲಿ ಬಗೆಹರಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಪ್ರವಾಸ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ ರದ್ದಾಗಿದೆ. ಈ ಮೂಲಕ ರೈತರ ಪ್ರತಿಭಟನೆ ಸಹ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.