ಸಿದ್ದಾಪುರ: ಭಾಷೆಯೊಂದು ಬಳಸುವುದು ಮತ್ತು ಬೆಳೆಸುವುದರಿಂದಲೇ ಉಳಿಯ ಬೇಕಾದ ಅನಿವಾರ್ಯತೆ ಇದೆ. ಅನ್ಯ ಭಾಷೆಯ ವ್ಯಾಮೋಹವೆನ್ನುವುದು ಉರುಳಾಗಬಹುದು. ನಮ್ಮ ನುಡಿ ನಮಗೆ ಯಾವತ್ತೂ ಶ್ರೇಷ್ಠವೆ. ಅದನ್ನು ಮರೆತರೆ ಆಪತ್ತು ತಪ್ಪಿದ್ದಲ್ಲ. ಮುತುವರ್ಜಿಯಿಂದ ಕನ್ನಡ ನುಡಿಯನ್ನು ಉಳಿಸುವ ಕೆಲಸವಾಗಬೇಕಾಗಿದೆ ಎಂದು ಹಿರಿಯ ವಕೀಲರಾದ ಜೆ.ಪಿ.ಎನ್.ಹೆಗಡೆ ಹರಗಿ ಹೇಳಿದರು.
ಅವರು ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಘಟಗಿಯ ಶತಮನೋತ್ಸವ ಭವನದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಹಮ್ಮಿಕೊಂಡ ಕನ್ನಡ ನುಡಿಸೇಸೆ- 2022 ಎಂಬ ವಿಶಿಷ್ಟ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಸ್ಡಿಎಮ್ಸಿ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಇಟಗಿ ಕರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಟಗಿ ಸೇವಾ ಸಹಕರಿ ಸಂಘದ ನಿರ್ದೇಶಕ ನಾರಾಯಣಮೂರ್ತಿ ಹೆಗಡೆ ಹರಗಿ, ಅರಣ್ಯ ಇಲಾಖೆಯ ಇಸ್ಮಾಯಿಲ್ ಹಾಗೂ ಸಾಮಾಜಿಕ ಕಾರ್ಯಕರ್ತ ರಮಾನಂದ ನಾಯ್ಕ ಹರಗಿ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಭಾರ ಮುಖ್ಯಾಧ್ಯಾಪಕ ರಾಮನಾಥ ನಾಯ್ಕ ಸ್ವಾಗತಿಸಿದರು. ನಂತರ ಇಟಗಿಯ ಕಲಾಭಾಸ್ಕರ ಇವರಿಂದ ಗುರುದಕ್ಷಿಣೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.