ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದಲ್ಲಿ ಬುಧವಾರ ಸಂಜೆ ಚಿರತೆ ದಾಳಿ ಹಿನ್ನಲೆ ಗುರುವಾರ ಸಾರ್ವಜನಿಕರ ಸಭೆ ಅಧಿಕಾರಿಗಳ ಸಮಕ್ಷಮ ಜರುಗಿತು.
ಕಳೆದ ಕೆಲ ವರ್ಷದಿಂದ ಕಾಡುಪ್ರಾಣಿಯಾದ ಕಾಡುಹಂದಿ ಹಾಗೂ ಮಂಗಗಳು ರೈತರ ಬೆಳೆ ನಾಶ ಮಾಡುತ್ತಿದ್ದವು. ಇತ್ತೀಚಿಗೆ ಚಿರತೆ ದಾಳಿಯಿಂದ ನಾಯಿ ಮತ್ತು ಆಕಳುಗಳು ಬಲಿಯಾಗುತ್ತಿವೆ. ಇದೀಗ ಮಾನವರ ಮೇಲೆ ದಾಳಿ ಮಾಡುತ್ತಿವೆ. ಇದರ ನಿಯಂತ್ರಣ ಯಾವಾಗ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷದಿಂದ ಲೆಕ್ಕವಿಲ್ಲದಷ್ಟು ನಾಯಿ, ಆಕಳು ಕಾಡು ಪ್ರಾಣಿಯ ದಾಳಿಗೆ ತುತ್ತಾಗಿದೆ. ಸಂಬಂಧಿಸಿದ ಇಲಾಖೆಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ ಎಂದರು.
ಅಕೇಶಿಯಾ ಗಿಡಗಳನ್ನು ನಾಟಿ ಮಾಡಬಾರದು ಎಂದು ಸರ್ಕಾರ ಕಾನೂನು ಜಾರಿ ಮಾಡಿದೆ. ನಮ್ಮ ಗ್ರಾಮದಲ್ಲಿ ಪ್ರತಿ ವರ್ಷವು ನಾಟಿ ಮಾಡಲಾಗುತ್ತಿದೆ. ಸರ್ಕಾರದ ನಿಯಮ ನಮ್ಮಲ್ಲಿ ಅನ್ವಯವಾಗುವುದಿಲ್ಲವಾ? ಹಣ್ಣು- ಹಂಪಲು ಗಿಡವಿಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ ಎಂದು ಆರೋಪಿಸಿದರು.
ಆರ್ಎಫ್ಓ ವಿಕ್ರಂ ರೆಡ್ಡಿ ಮಾತನಾಡಿ, ಸಾರ್ವಜನಿಕರ ಆತಂಕ ಅರ್ಥವಾಗಿದೆ. ಅಧಿಕಾರಿಗಳು ಈ ಬಗ್ಗೆ ಆಗಾಗ ಕ್ರಮ ಕೈಗೊಳ್ಳುತ್ತಿದ್ದಾರೆ. ಒಂದು ವಾರಗಳ ಕಾಲ ನಿಮ್ಮ ಭಾಗದಲ್ಲಿ ಸಂಜೆಯಿಂದ ರಾತ್ರಿಯವರೆಗೆ ನಮ್ಮ ಇಲಾಖೆಯ ಸಿಬ್ಬಂದಿ ಸಂಚರಿಸಲಿದ್ದಾರೆ. ಗರ್ನಲ್ನಂತಹ ವಸ್ತುಗಳನ್ನು ಸ್ಫೋಟಿಸಿ ಕಾಡಿನತ್ತ ಕಾಡು ಪ್ರಾಣಿಗಳನ್ನು ಕಳುಹಿಸುತ್ತೇವೆ. ಸಾರ್ವಜನಿಕರು ಅಧಿಕಾರಿಗಳ ಜೊತೆ ಸಹಕರಿಸಬೇಕು. ಮುಂದಿನ ದಿನದಲ್ಲಿ ಅಕೇಶಿಯಾ ಗಿಡ ಈ ಭಾಗದಲ್ಲಿ ನಾಟಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ರಜನಿ ನಾಯ್ಕ, ಉಪಾಧ್ಯಕ್ಷ ಸಚಿನ ನಾಯ್ಕ, ಸದಸ್ಯ ಬಾಲಚಂದ್ರ ನಾಯ್ಕ, ಲಕ್ಷ್ಮೀ ಮುಕ್ರಿ, ಸಾರ್ವಜನಿಕರು, ವಿವಿಧ ಸಂಘಟನೆಯ ಪ್ರಮುಖರು, ಇಲಾಖೆಯ ಅಧಿಕಾರಿಗಳು ಇದ್ದರು.