Slide
Slide
Slide
previous arrow
next arrow

ಸ್ಲಮ್ ಬೋರ್ಡ್ಗೆ ನೀಡಲಾದ ಹಣವನ್ನು ವಾಪಸ್ ಪಡೆಯಲು ಆಗ್ರಹ

300x250 AD

ಹೊನ್ನಾವರ: ರಾಜ್ಯದ ಬೊಕ್ಕಸವನ್ನು ಶೇ 40ರಷ್ಟು ಭ್ರಷ್ಟಚಾರದ ಮೂಲಕ ನುಂಗಿ ನೀರು ಕುಡಿದಿರುವ ಬಿಜೆಪಿ ಸರ್ಕಾರದ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ 450 ಕೋಟಿ ಹಣವನ್ನು ಸ್ಲಂಬೋರ್ಡ್ ವಸತಿ ನಿರ್ಮಾಣ ಏಜೆನ್ಸಿಗಳಿಗೆ ನೀಡಿರುವ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ತೀವ್ರವಾಗಿ ಖಂಡಿಸಿದ್ದು, ಕೂಡಲೇ ಸ್ಲಮ್ ಬೋರ್ಡ್ಗೆ ನೀಡಲಾದ ಹಣವನ್ನು ವಾಪಸ್ ಪಡೆಯಬೇಕೆಂದು ಜಿಲ್ಲಾ ಕಾರ್ಯದರ್ಶಿ ತಿಲಕ ಗೌಡ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದುವರೆಗೂ ಲಕ್ಷಾಂತರ ಕಾರ್ಮಿಕರು ಫಲಾನುಭವಿಗಳಾಗಿ ನೊಂದಣಿಯಾಗಿದ್ದಾರೆ. ಅದರಲ್ಲಿ ಸಾವಿರಾರು ಕಾರ್ಮಿಕರು ಹತ್ತಾರು ವರ್ಷಗಳಿಂದ ಮಂಡಳಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ಆರ್ಥಿಕ ನೆರವು ನೀಡಲು ಕ್ರಮ ವಹಿಸದ ಮಂಡಳಿ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ವಸತಿ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಸಚಿವರ ಒತ್ತಡಕ್ಕೆ ತಲೆಬಾಗಿ ಕೊಳಚೆ ನಿರ್ಮೂಲನ ಮಂಡಳಿ ಮೂಲಕ ನಿರ್ಮಾಣವಾಗುತ್ತಿರುವ 21 ಸಾವಿರ ಮನೆಗಳಿಗೆ 433 ಕೋಟಿ ಹಣವನ್ನು ಹಾಗೂ ರಾಜೀವ್‌ಗಾಂಧೀ ವಸತಿ ನಿಗಮದ ಮೂಲಕ ನಿರ್ಮಿಸುವ 423 ಮನೆಗಳಿಗೆ 8.33 ಕೋಟಿ ಹಣವನ್ನು ಏಜೆನ್ಸಿದಾರರಿಗೆ ವರ್ಗಾಯಿಸಿ ಲಕ್ಷಾಂತರ ಬಡ ಕಟ್ಟಡ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಇದರಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಸಚಿವರು ಹಾಗೂ ಶಾಸಕರುಗಳು ಅಪಾರ ಪ್ರಮಾಣದ ಹಣವನ್ನು ಕಮಿಷನ್ ರೂಪದಲ್ಲಿ ದೋಚಲು ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಸ್ಲಂ ಬೋರ್ಡ್ ಹಾಗೂ ರಾಜೀವ್‌ಗಾಂಧಿ ವಸತಿ ಯೋಜನೆ ಮೂಲಕ ನಿರ್ಮಾಣವಾಗುತ್ತಿರುವ ವಸತಿ ಯೋಜನೆಗೆ ತನ್ನ ಪಾಲಿನ ಹಣವನ್ನು ನೀಡದೇ ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸೆಸ್ ರೂಪದಲ್ಲಿ ಸಂಗ್ರಹವಾದ ನೂರಾರು ಕೋಟಿ ಬಡವರ ಬೆವರಿನ ಹಣದ ಮೇಲೆ ಕಣ್ಣಾಕಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ವಸತಿ ಇಲಾಖೆ ಜವಾಬ್ದಾರಿ ಹೊಂದಿರುವ ಸಚಿವ ವಿ.ಸೋಮಣ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿ ಮನೆ ನಿರ್ಮಿಸುವ ಬದಲು ಸಾವಿರಾರು ನಕಲಿ ಕಟ್ಟಡ ಕಾರ್ಮಿಕರನ್ನು ಮಂಡಳಿಯಲ್ಲಿ ನೊಂದಾಯಿಸಿ ನೂರಾರು ಕೋಟಿ ಹಣ ದೋಚಿದ್ದಾರೆ ಎಂದು ದೂರಿದ್ದಾರೆ.
ಕಾರ್ಮಿಕರ ಹಿತವನ್ನು ಹಾಗೂ ಕಲ್ಯಾಣ ಮಂಡಳಿ ನಿಧಿಯನ್ನು ರಕ್ಷಿಸಬೇಕಾದ ಸಚಿವ ಶಿವರಾಮ್ ಹೆಬ್ಬಾರ್ ಈಗಾಗಲೇ ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಖರೀದಿಗಳ ಮೂಲಕ ನೂರಾರು ಕೋಟಿ ಹಣದ ಅವ್ಯವಹಾರ ನಡೆಸಿದ್ದಾರೆ. ಈಗ ಸಾಲದು ಎಂಬಂತೆ ಬಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಕಲ್ಯಾಣ ಮಂಡಳಿಯಿಂದ ಅಪಾರ ಮೊತ್ತದ ಹಣವನ್ನು ನೀಡಿ ತಮ್ಮ ಭವಿಷ್ಯದ ರಾಜಕೀಯ ಭದ್ರಪಡಿಸಲು ಮುಂದಾಗಿದ್ದಾರೆ. ಮಂಡಳಿಯಲ್ಲಿ ಈಗಾಗಲೇ ವಸತಿ ನಿರ್ಮಾಣಕ್ಕೆ ಅರ್ಜಿಗಳನ್ನು ಸಲ್ಲಿಸಿ ಕಾರ್ಮಿಕರು ಕಾಯುತ್ತಿದ್ದರೂ ಮಂಡಳಿ ಅಧಿಕಾರಿಗಳು ಒಂದು ಸ್ಪಷ್ಟವಾದ ಯೋಜನೆ ರೂಪಿಸದೇ ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ನೂರಾರು ಕೋಟಿ ನಿಧಿಯನ್ನು ಸ್ಲಂ ಬೋರ್ಡ ಏಜೆನ್ಸಿಗಳಿಗೆ ಧಾರೆ ಎರೆದಿದ್ದಾರೆ. ಇದು ಲಕ್ಷಾಂತರ ಬಡ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಮಾಡಿರುವ ಬಹುದೊಡ್ಡ ದ್ರೋಹದ ಕೆಲಸವಲ್ಲದೆ ಮತ್ತೇನೂ ಅಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಕಟ್ಟಡ ಕಾರ್ಮಿಕ ಕಾನೂನು, ಕಲ್ಯಾಣ ಮಂಡಳಿ ಹಾಗೂ ಸೆಸ್ ಸಂಗ್ರಹಿಸುವಲ್ಲಿ ಮತ್ತು ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಅರಿವು ಮೂಡಿಸುವಲ್ಲಿ ಕಾರ್ಮಿಕ ಸಂಘಟನೆಗಳು ಮೂರು ದಶಕಗಳಿಂದ ಅಪಾರ ಪ್ರಮಾಣದ ಶ್ರಮವನ್ನು ಹಾಕುತ್ತಿದೆ. ಆದರೆ ಕಾರ್ಮಿಕ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇವಲ ಏಜೆಂಟರು, ಭ್ರಷ್ಟರುಗಳಿಗೆ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ. ಅದರ ಪರಿಣಾಮ ನೈಜ ಕಾರ್ಮಿಕರಿಗೆ ಮಂಡಳಿ ಸೌಲಭ್ಯಗಳು ದೊರಕದೆ ನಕಲಿ ಜನರು ಕಬಳಿಸುವಂತಾಗಿದೆ. ಈ ಬಗ್ಗೆ ಹತ್ತಾರು ದೂರುಗಳನ್ನು ನೀಡಿದರೂ ಯಾವುದೇ ಕ್ರಮವಹಿಸದೇ ಅಧಿಕಾರಿಗಳು ಜಾಣ ಕಿವುಡರಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ತಿಮ್ಮಪ್ಪ ಗೌಡ, ಮಂಜುನಾಥ ಗೌಡ, ಕೃಷ್ಣ ಗೌಡ, ಗೋವಿಂದ ಮುಕ್ರಿ, ಭಾರತಿ ಗೌಡ, ಸಾವಿತ್ರಿ ನಾಯ್ಕ, ಮಹಾಲಕ್ಷ್ಮಿ ಗೌಡ, ಲತಾ ಅಂಬಿಗ, ಗಜಾನನ ಗೌಡ, ಶಂಭು ಗೌಡ ಇನ್ನಿತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top