ಭಟ್ಕಳ: ರಾಜಕಾರಣದ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿರುವ ನಾವು, ನಮ್ಮ ಮುಂದೆ ಬರುವ ಇತರ ಪಕ್ಷಗಳ ಸವಾಲುಗಳನ್ನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದರ ಬಗ್ಗೆ ಬಹಳ ನಿಖರವಾದ, ಸ್ಪಷ್ಟವಾದ ನಿಲುವನ್ನು ಹೊಂದಲು ಈ ಕಾರ್ಯಕಾರಿಣಿ ಸಹಕಾರವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಲ್ಲಿನ ಕಡವಿಕಟ್ಟೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಾರ್ಯಕಾರಿಣಿ ಸಭೆಯು ಮುಂದಿನ ದಿನಗಳಲ್ಲಿ ಪಕ್ಷವನ್ನು ಯಾವ ರೀತಿ ಸಂಘಟಿಸಿ ಮುನ್ನಡೆಸಬಹುದು ಹಾಗೂ ಮುಂಬರುವ ಚುನಾವಣೆಯನ್ನು ಹೇಗೆ ಎದುರಿಸಬಹುದು ಎಂದು ತಿಳಿಸಿದರು.
ಕಾರ್ಯಕಾರಿಣಿ ಸಭೆ ಎನ್ನುವುದು ಪಕ್ಷದ ಪ್ರಗತಿ ಪರಿಶೀಲನೆಯ ಸಭೆಯಾಗಿದೆ. ಇಲ್ಲಿ ನಾವು ಮಾಡಿರುವ ತಪ್ಪುಗಳು ಮುಂದೆ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಬೇಕು. ಇದರ ಮೂಲಕ ನಮ್ಮ ಪಕ್ಷ ಪ್ರಬಲವಾಗುವಂತೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು. ಮೀಸಲಾತಿ ಹೆಚ್ಚಳವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಲಾಭದಾಯಕವಾಗಲಿದೆ. ನಮ್ಮ ಸರ್ಕಾರ ಯಾರಿಗೂ ತುಷ್ಟಿಗುಣ ಮಾಡುವುದಿಲ್ಲ, ನ್ಯಾಯವನ್ನು ಒದಗಿಸುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಪ್ರಚಾರವನ್ನು ಮಾತ್ರ ಬಯಸುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ವಂಶ ಪಾರಂಪರ್ಯ ಪದ್ಧತಿ ಇಲ್ಲ ಯಾರಿಗೂ ಕೂಡ ನಾವು ತುಷ್ಟಿಗುಣ ಮಾಡುವುದಿಲ್ಲ ನಾವು ಅಧಿಕಾರದಲ್ಲಿ ಇರಲಿ ಅಥವಾ ಅಧಿಕಾರದಲ್ಲಿ ಇಲ್ಲದೆ ಇರಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಜನರಿಗೆ ತೊಂದರೆ ಆದರೆ ನಾವು ಸರ್ಕಾರ ವಿರುದ್ಧ ಹೋರಾಡಲು ಮುಂಚೂಣಿಯಲ್ಲಿರುತ್ತೇವೆ. ಬಿಜೆಪಿ ಪಕ್ಷವನ್ನ ಜನರು ಬೇರೆ ಪಕ್ಷಕ್ಕಿಂತ ವಿಭಿನ್ನವಾಗಿ ನೋಡುತ್ತಾರೆ. ಜನಸಂಘದ ಕಾಲದಿಂದಲೂ ಬಿಜೆಪಿ ಪಕ್ಷ ಇದೇ ರೀತಿ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಕಾರ್ಯಕರ್ತರು ಕೇವಲ ಚುನಾವಣೆಯಲ್ಲಿ ಮಾತ್ರ ಒಟ್ಟಾಗುವುದಿಲ್ಲ ಚುನಾವಣೆ ಇಲ್ಲದ ಸಂದರ್ಭದಲ್ಲಿ ಕೂಡ ನಾವು ಒಟ್ಟಾಗಿ ಪಕ್ಷ ಸಂಘಟನೆಯ ಕಾರ್ಯವನ್ನು ಮಾಡುತ್ತೇವೆ ಇದನ್ನು ಈಗಲೂ ಸಹ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಮಾಜಿ ಸಚಿವ ಶಿವಾನಂದ ನಾಯ್ಕ ಮುಂತಾದವರು ಇದ್ದರು.
ಕೋಟ ಶ್ರೀನಿವಾಸ್ ಪೂಜಾರಿ, ಸಚಿವ: ನಾಮಧಾರಿ ಸಮಾಜಕ್ಕೆ ಪ್ರತ್ಯೇಕ ನಿಗಮ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೊಂಡಿದ್ದು, ಒಂದೊಮ್ಮೆ ಅದು ಸಾಧ್ಯವಾಗದೇ ಹೋದಲ್ಲಿ ನಾಮಧಾರಿ ಸಮಾಜದವರು ಇರುವ ಸ್ಥಳಗಳಲ್ಲಿ ನಾರಾಯಣಗುರು ವಸತಿ ಶಾಲೆಯನ್ನಾದರೂ ಒದಗಿಸಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಕೋರಿದ್ದೇನೆ.