ಜೊಯಿಡಾ: ತಾಲೂಕಿನಾದ್ಯಂತ ಈ ಬಾರಿ ಅತಿಯಾದ ಮಳೆ ಗಾಳಿಯಿಂದಾಗಿ ಸಾಕಷ್ಟು ರೈತರ ಅಡಿಕೆ ತೋಟಗಳು ಹಾನಿಯಾಗಿವೆ. ಅಷ್ಟೇ ಅಲ್ಲದೇ ವರ್ಷದ ಅರ್ಧದಷ್ಟು ಅಡಿಕೆ ಬೆಳೆ ಕೊಳೆ ರೋಗದಿಂದ ಹಾಳಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳು ಗಮನ ಹರಿಸಿಲ್ಲ, ಯಾವುದೇ ಪರಿಹಾರ ಸಿಗಲಿಲ್ಲ ಎಂಬುದು ರೈತರ ಅಳಲಾಗಿದೆ.
ತಾಲೂಕಿನ ನಂದಿಗದ್ದಾ, ಉಳವಿ, ನಾಗೋಡಾ, ಗಾಂಗೋಡಾ, ಕುಂಬಾರವಾಡಾ ಸೇರಿದಂತೆ ಇನ್ನೂ ಕೆಲ ಗ್ರಾಮ ಪಂಚಾಯತನ ರೈತರು ಅಡಿಕೆ ಕೊಳೆ ಬಂದಿದೆ ಎಂದು ತೋಟಗಾರಿಕಾ ಇಲಾಕೆ ಮೂಲಕ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದರು. ಆದರೆ ಪರಿಹಾರ ಮಾತ್ರ ಈವರೆಗೂ ಸಿಕ್ಕಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಉತ್ತರಕರ್ನಾಟಕದಲ್ಲಿನ ರೈತರಿಗೆ ಬೆಳೆ ಹಾನಿಯಾದಲ್ಲಿ ಕೂಡಲೇ ಪರಿಹಾರ ಸಿಗುತ್ತಿದೆ. ಆದರೆ ಮಲೆನಾಡಿನ ಭಾಗದ ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ಬಂದು ಸಾಕಷ್ಟು ಹಾನಿ ಉಂಟಾದರು ಪರಿಹಾರವನ್ನು ಸರ್ಕಾರ ನೀಡಿಲ್ಲ. ಅಡಿಕೆ ಬೆಳೆ ವರ್ಷದ ಬೆಳೆಯಾಗಿದ್ದು, ಕೆಲ ರೈತರು ಅಡಿಕೆ ಬೆಳೆಯನ್ನು ನಂಬಿ ಬದುಕುತ್ತಿದ್ದು, ಕೊಳೆ ರೋಗದಿಂದ ಅಡಿಕೆ ಬೆಳೆ ಸಂಪೂರ್ಣ ಸರ್ವನಾಶವಾಗಿದ್ದು, ರೈತರಿಗೆ ಪರಿಹಾರ ಒದಗಿಸುವುದು ಅತ್ಯವಶ್ಯವಾಗಿದೆ.
ಅತಿಯಾದ ಮಳೆಯಿಂದಾಗಿ ಮರವೊಂದು ಬಿದ್ದು ನೂರಾರು ಅಡಿಕೆ ಮರಗಳು ಮುರಿದು ಹಾಳಾಗಿದ್ದವು. ತೋಟಗಾರಿಕಾ ಇಲಾಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ತತ್ತರಿಸಿದ್ದಾರೆ. ಕೂಡಲೇ ಸರ್ಕಾರ ಪರಿಹಾರ ನೀಡಬೇಕು. ಜಿಲ್ಲಾಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ.
• ಶ್ರೀನಿವಾಸ ಭಟ್ಟ ಕೊಂಬಾ, ಹಾನಿಗೊಳಗಾದ ರೈತ