ಹೊನ್ನಾವರ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,758 ಕಿ.ಮೀ. ಭಾರತ ಜೋಡೋ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧೀ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಗೆ ಪಾದಾರ್ಪಣೆ ಮಾಡುವ ಮೂಲಕ ಕರ್ನಾಟಕಕ್ಕೆ ಆಗಮಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಹೇಳಿದರು.
ರಾಜ್ಯಾದ್ಯಂತ ಪ್ರತಿ ಬ್ಲಾಕ್ ಮಟ್ಟದಲ್ಲಿ ಬೈಕ್ ರ‍್ಯಾಲಿ ಮೂಲಕ ರಾಹುಲ್ ಗಾಂಧೀಯವರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 22 ದಿನಗಳ ಕಾಲ ಸುಮಾರು 580 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ ಎಂದರು.
ಇದೇ ವೇಳೆ ಶರಾವತಿ ವೃತ್ತದಿಂದ ಬಂದರ್ ರಸ್ತೆಯ ಮೂಲಕ, ದುರ್ಗಾಕೇರಿ ಮಾರ್ಗವಾಗಿ, ಕರ್ಕಿ ನಾಕಾ ಬೆಂಗಳೂರು ಸರ್ಕಲ್ ಮಾರ್ಗದ ಮೂಲಕ ಪುನಃ ಶರಾವತಿ ಸರ್ಕಲ್‌ಗೆ ಆಗಮಿಸಿ, ಬೈಕ್ ರ‍್ಯಾಲಿಯನ್ನು ಸಮಾಪ್ತಿಗೊಳಿಸಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧೀ ತಮ್ಮ ಪ್ರಾಣದ ಹಂಗು ತೊರೆದು ದೇಶದ ಐಕ್ಯತೆ ಮತ್ತು ಸುಭದ್ರತೆಗಾಗಿ ಭಾರತ ಜೋಡೋ ಪಾದಯಾತ್ರೆ ಕೈಗೊಂಡಿರುವುದು ಶ್ಲಾಘನೀಯ ಎಂದರು. ಕಾಂಗ್ರೆಸ್ ಪಕ್ಷದ ತ್ಯಾಗ, ಬಲಿದಾನ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಭವ್ಯ ಭಾರತವನ್ನು ಜಾತಿ ಮತ್ತು ಧರ್ಮಗಳ ಹೆಸರಿನಿಂದ ಒಡೆದಾಳಲು ರಾಹುಲ್ ನೇತ್ರತ್ವದ ಕಾಂಗ್ರೆಸ್ ಪಕ್ಷ ಎಂದೆಂದಿಗೂ ಅವಕಾಶ ನೀಡದು ಎಂದು ಎಚ್ಚರಿಸಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ನಮ್ಮನ್ನಾಳುತ್ತಿರುವ ಸರಕಾರ, ಜನರ ಮಧ್ಯೆ ಜಾತಿ ಮತ್ತು ಧರ್ಮದ ಹೆಸರಲ್ಲಿ ಬಿರುಕು ಹುಟ್ಟಿಸಲು ಪ್ರಯತ್ನಿಸಿದರೆ, ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧೀಯವರ ನೇತ್ರತ್ವದಲ್ಲಿ ಭಾರತ ಜೋಡೋ ಪಾದಯಾತ್ರೆಯ ಮೂಲಕ ಒಡೆದ ಮನಸ್ಸುಗಳನ್ನು ಬೆಸೆಯುವ ಕೆಲಸಕ್ಕೆ ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ಮಹೇಶ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಜಿಕ್ರಿಯಾ ಶೇಖ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣಾ ಹರಿಜನ, ಸೇವಾದಳ ವಿಭಾಗದ ಅಧ್ಯಕ್ಷ ಮೋಹನ ಆಚಾರಿ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಕೆ.ಎಚ್.ಗೌಡ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸಶೆಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.