ಭಟ್ಕಳ: ತಾಲ್ಲೂಕಿನ ಸಾಗರ ರಸ್ತೆಯಿಂದ ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು
ಸರಕಾರಿ ಆಸ್ಪತ್ರೆಗೆ ಸಾಗುವ ರಸ್ತೆ ಸಾಕಷ್ಟು ವರ್ಷದಿಂದ ಹಾಳಾಗಿದೆ. ಆಸ್ಪತ್ರೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯತೆ ಪಡೆದಿದ್ದು, ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಇಲ್ಲಿನ ಸಂಪರ್ಕ ರಸ್ತೆ ಹದಗೆಟ್ಟಿರುವುದು ರೋಗಿಗಳಿಗೆ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಸಾಗರ ರಸ್ತೆಯಿಂದ ಆಸ್ಪತ್ರೆ ಬರುವ ಸಂಪರ್ಕ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಹಾಗ ವಾಹನಗಳ ಹೆಚ್ಚಿನ ಓಡಾಟವಿದೆ. ಹೆಚ್ಚು ಜನಸಂಚಾರವಿರುವ ರಸ್ತೆಯೇ ತೀರ ಹೊಂಡಗಳು ಬಿದ್ದು ಹದಗೆಟ್ಟಿರುವುದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಂಬ್ಯುಲೆನ್ಸ್ಗಳು ತುರ್ತು ಸಂದರ್ಭದಲ್ಲಿ ಅತಿ ವೇಗದಿಂದ ಸಂಚರಿಸಲು ಕೂಡ ತೊಂದರೆಯಾಗುತ್ತಿದೆ. ಹೀಗಾಗಿ ಒಮ್ಮೆ ರಸ್ತೆ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಪ್ರತಿನಿತ್ಯವೂ ಅಗತ್ಯವಿರುವ ಈ ರಸ್ತೆಯ ದುರಸ್ತಿ ಕಾಮಗಾರಿಯನ್ನು ಮಾಡಿಸಿಕೊಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ತಹಶೀಲ್ದಾರ ಡಾ.ಸುಮಂತ ಬಿಇ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರಮೇಶ್ವರ ನಾಯ್ಕ ಕಂಡೆಕೋಡ್ಲು, ಗಣಪತಿ ನಾಯ್ಕ ಮುಟ್ಟಳ್ಳಿ, ಗಣೇಶ್ ಹಳ್ಳೇರ ಮುಂಡಳ್ಳಿ, ಶಂಕರ ನಾಯ್ಕ ಕಡವಿನಕಟ್ಟ, ಸುರೇಶ ನಾಯ್ಕ ಗುಳ್ಮಿ, ಶನಿಯಾರ ಮೊಗೇರ ಬೆಳಕೆ, ರಾಜು ನಾಯ್ಕ ಮುಟ್ಟಳ್ಳಿ ಮುಂತಾದವರಿದ್ದರು.
ಸರ್ಕಾರಿ ಆಸ್ಪತ್ರೆಯ ಮುಂಭಾಗದ ರಸ್ತೆಯು ಯುಜಿಡಿ ಕಾಮಗಾರಿಯಿಂದಾಗಿ ಬಹಳ ಹದಗೆಟ್ಟಿದೆ. ಪುರಸಭೆ ಅಧ್ಯಕ್ಷರು ತಮಗೆ ಬೇಕಾದ ಸ್ಥಳಗಳಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಕೊಂಡಿದ್ದಾರೆ. ಆದರೆ ಸಾರ್ವಜನಿಕರು, ರೋಗಿಗಳು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಓಡಾಡುವ ಈ ರಸ್ತೆ ಮತ್ತು ಯುಜಿಡಿ ಕಾಮಗಾರಿಯನ್ನು ಜನರಿಗೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ಮಾಡಿದ್ದಾರೆ.
• ಗಣೇಶ ಹಳ್ಳೇರ, ಆಟೋ ಚಾಲಕ
ಯುಜಿಡಿ ಕಾಮಗಾರಿಗೆಂದು ರಸ್ತೆಗಳನ್ನು ಅಗೆದು ಹೊಂಡ ಮಾಡಿದ್ದರು. ಅದರಲ್ಲಿ ಹಾಕಿದ ದೊಡ್ಡ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದg ನೀಡುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಯುವತಿಯೋರ್ವಳು ನಡೆದುಕೊಂಡು ಹೋಗುವ ವೇಳೆ ಜಲ್ಲಿ ಕಲ್ಲು ಬಡಿದು ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೆ ಇಂತಹ ಅನಾಹುತ ಆಗುವ ಮುನ್ನ ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕಿದೆ.
• ಶಂಕರ ನಾಯ್ಕ, ಆಟೋ ಚಾಲಕ