ಕಾರವಾರ: ತಾಲೂಕಿನ ಮಾಜಾಳಿ ಗ್ರಾಮದಲ್ಲಿ ಸುಮಾರು 250 ಕೋಟಿ ವೆಚ್ಚದಲ್ಲಿ ಬೃಹತ್ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮುಂದಾಗಿದ್ದು ಶುಕ್ರವಾರ ಮಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಆರ್ಝೆಡ್ ನೀತಿ ಬದಲಾವಣೆಗೆ ಒಪ್ಪಿಗೆ ಸಿಕ್ಕಿದ್ದು ಇದು ಲಾಭವಾಗಲಿದೆ. ಕಾರವಾರದ ಮಾಜಾಳಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು ಮತ್ಸ್ಯ ಸಂಪದ ಯೋಜನೆ ಜಾರಿಯಾಗಿದೆ ಎಂದಿದ್ದಾರೆ.
ದೇಶ ಅಭಿವೃದ್ಧಿ ಆಗಬೇಕಾದರೆ ನಮ್ಮ ಬಂದರುಗಳ ಸಾಮರ್ಥ್ಯ ವೃದ್ಧಿಯಾಗಬೇಕು ಎಂದು ಮೋದಿ ಅವರು ಕನಸು ಕಂಡಿದ್ದರು. 8 ವರ್ಷಗಳ ಯೋಜನೆಗೆ ಈಗ ಪ್ರತಿಫಲ ಸಿಗುತ್ತಿದೆ. ಮಾಜಾಳಿಯಲ್ಲಿ ಸುಮಾರು 250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಮಾಡಲು ಅನುಮೋದನೆ ದೊರೆತಿದ್ದು ಮೂರು ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶವಿದೆ ಎಂದಿದ್ದಾರೆ. ಈ ಎಲ್ಲಾ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಕರಾವಳಿ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗುತ್ತಿದೆ ಎಂದಿದ್ದಾರೆ.
ಕರಾವಳಿ ಉದ್ಯಮಿಗಳಿಗೆ ಸಿಆರ್ಜೆಡ್ ನಿಯಮಗಳಲ್ಲಿ ಗೋವಾ ಮತ್ತು ಕೇರಳಗಳಿಗೆ ಇರುವ ಅನುಕೂಲ ರಾಜ್ಯಕ್ಕೆ ಇರಲಿಲ್ಲ. ಈಗ ಸಿಆರ್ಜೆಡ್ ಕರ್ನಾಟಕದ ಮಾಸ್ಟರ್ ಪ್ಲಾನ್’ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಇದರಿಂದ ರಾಜ್ಯದ ಹಲವು ವರ್ಷಗಳ ಸಮಸ್ಯೆ ಪರಿಹಾರವಾದಂತೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಂದರು ನಿರ್ಮಾಣದ ಲಾಭಗಳು: ಮಾಜಾಳಿಯಲ್ಲಿ 250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣದಿಂದ ಸುಮಾರು 80 ಮೀನುಗಾರಿಕಾ ಬೋಟ್ ಗಳನ್ನ ನಿಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಅಂದಾಜು 15.5 ಟನ್ ನಷ್ಟು ಮೀನನ್ನ ಬಂದರು ನಿರ್ಮಾಣದಿಂದ ಹಿಡಿಯಲು ಮೀನುಗಾರರಿಗೆ ಸಹಾಯವಾಗಲಿದೆ. ಬಂದರು ನಿರ್ಮಾಣದಿಂದ 4716 ಮೀನುಗಾರರಿಗೆ ಉಪಯೋಗವಾಗಲಿದೆ. ಮೀನುಗಾರಿಕೆ ಪೂರಕವಾದ ಚಟುವಟಿಕೆಗಳಿಂದ ಸುಮಾರು 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಮೂರು ವರ್ಷದ ಅವಧಿಯಲ್ಲಿ ಬಂದರು ಕಾಮಗಾರಿ ಪೂರ್ಣ ಗೊಳಿಸಲು ಯೋಜನೆಯನ್ನ ಸರ್ಕಾರ ಮಾಡಿಕೊಳ್ಳಲಾಗಿದೆ.
ಕೋಟ್…
250 ಕೋಟಿ ವೆಚ್ಚದಲ್ಲಿ ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಬಂದರು ನಿರ್ಮಾಣಕ್ಕೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಮಾಜಾಳಿಯಲ್ಲಿ ಬಂದರು ನಿರ್ಮಾಣವಾಗಬೇಕು ಎನ್ನುವುದು ಹಲವು ವರ್ಷದ ಕನಸಾಗಿತ್ತು. ಅನುಮೋದನೆ ದೊರಕಿರುವುದು ಅಭಿವೃದ್ಧಿಗೆ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಂದರು ನಿರ್ಮಾಣಕ್ಕೆ ಮುನ್ನಡಿಯನ್ನು ಬರೆದಿದ್ದಾರೆ. ಈ ಮೂಲಕ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅವಕಾಶ ದೊರೆತಿದೆ.
• ರೂಪಾಲಿ ನಾಯ್ಕ, ಕಾರವಾರ ಶಾಸಕಿ