ಮುಂಡಗೋಡ: ಮಳೆಯಿಂದಾಗಿ ಬಂಕಾಪುರ ರಸ್ತೆ ನದಿಯಂತಾಗಿ ರೂಪುಗೊಂಡಿದ್ದ ಬಗ್ಗೆ ಹಾಗೂ ಸ್ಥಳೀಯರು ಪ.ಪಂ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಹಲವು ವರದಿಯಾಧಾರದಲ್ಲಿ ತಹಶೀಲ್ದಾರ ಶಂಕರ ಗೌಡಿ ಪ.ಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳದಲ್ಲಿನ ಸಮಸ್ಯೆ ಅರಿತು ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುವಂತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸಲು ಪಟ್ಟಣ ಪಂಚಾಯತ್ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಖ್ಯಾಧಿಕಾರಿಗಳು ತಹಶೀಲ್ದಾರರಿಗೆ ತಿಳಿಸಿ ಹಾಗೂ ಕಾಮಗಾರಿಗೆ 3 ಸಿಡಿಗಳನ್ನು ನಿರ್ಮಾಣ ಮಾಡಲು 55 ಲಕ್ಷ ರೂ. ಟೆಂಡರ್ ಕರೆಯಲಾಗಿದೆ. ಟೆಕ್ನಿಕಲ್ ಬಿಡ್ ಮಂಜೂರಾಗಿದ್ದು, ಆರ್ಥಿಕ ಬಿಡ್ ಮಂಜೂರಾಗದೆ ಇರುವುದರಿಂದ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗಮನಕ್ಕೆ ತಂದರು. ಈ ವೇಳೆ ಕಾರವಾರ ಯೋಜನಾ ನಿರ್ದೇಶಕರಿಗೆ ದೂರವಾಣಿ ಕರೆಮಾಡಿದ ತಹಶೀಲ್ದಾರ, ಸಮಸ್ಯೆಯ ಕುರಿತು ತಿಳಿಸಿದ್ದಾರೆ.
ಸಮಸ್ಯೆ ನಿವಾರಣೆಗೆ ತಾತ್ಕಾಲಿಕ ಕಾಮಗಾರಿ ಮಾಡಲಾಗುವುದು ಎಂದು ತಹಶೀಲ್ದಾರ ಶಂಕರ ಗೌಡಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ, ಸದ್ಯಕ್ಕೆ ತಾತ್ಕಾಲಿಕ ಕಾಮಗಾರಿ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.