ಅಂಕೋಲಾ: 75ನೇ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ದೇಶದಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವ ಸಮಯದಲ್ಲಿ ಭಾವಿಕೇರಿಯ ಗಣೇಶೋತ್ಸವ ಸಮಿತಿಯು 75 ವರ್ಷ ಪೂರೈಸಿದ ಭಾವಿಕೇರಿಯ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಸೆ.1ರ ಬೆಳಿಗ್ಗೆ 8.30ಕ್ಕೆ ಆಯೋಜಿಸಿದೆ.
ಉಪನ್ಯಾಸಕ ಸುಬ್ರಾಯ ಆರ್.ನಾಯಕ ಸಹಯೋಗ ಹಾಗೂ ಬಹಳ ದಿನಗಳಿಂದ ಅದರ ಆಲೋಚನೆಯಲ್ಲಿದ್ದ ಈ ಕಾರ್ಯಕ್ರಮವನ್ನು ಭಾರತದ ‘ಸ್ವಾತಂತ್ರ್ಯ ಅಮೃತಮಹೋತ್ಸವ’ದ ಸಂದರ್ಭದಲ್ಲಿ ಸಾಕಾರಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟೂ 16 ನಿವೃತ್ತನೌಕರರು ಸಮಾವೇಶಗೊಳ್ಳಲಿದ್ದು, ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಲಕ್ಷ್ಮಿ ಪಾಟೀಲ್, ಅತಿಥಿಗಳಾಗಿ ಸಾಹಿತಿ ಎನ್.ವಿ. ನಾಯಕ ಹಾಗೂ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರೂ ಆದ ಪಾಂಡು ಬಿ.ಗೌಡ ವಹಿಸಲಿದ್ದಾರೆ. ಅದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾವಿಕೇರಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರಾತ್ರಿ 9ರಿಂದ ಶ್ರೀನಾರಾಯಣ ದಾಸರಿಂದ ಕೀರ್ತನೆ ‘ಭಕ್ತಸುಧಾಮ’ ನಡೆಯಲಿದೆ.
ಒಟ್ಟೂ 7 ದಿನ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೆ.3ರಂದು ಭಾವಿಕೇರಿಯ ಬಾಲಚಂದ್ರ ಎನ್.ನಾಯಕ ವಿರಚಿತ ‘ಮರಣ ಶಾಸನ’ ನಾಟಕ ಸ್ಥಳೀಯ ಪ್ರತಿಭೆಗಳಿಂದ ಸಾಕಾರಗೊಳ್ಳಲಿದೆ. ಸೆ.5ರಂದು ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ ಹಾಗೂ ಅದೇ ದಿನ ರಾತ್ರಿ 10 ಗಂಟೆಯಿಂದ’ ‘ದಿ.ಸಂದೀಪ ಸ್ಮರಣ ವೇದಿಕೆ’ಯಲ್ಲಿ ‘ಜ್ವಾಲಾ ಪ್ರತಾಪ’ ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ. ಹೀಗೆ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಮತ್ತು ದೇಶಪ್ರೇಮದ ವೇದಿಕೆಯಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.