ನವದೆಹಲಿ: ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 2021 ರಲ್ಲಿ 209.96 ಮಿಲಿಯನ್ ಟನ್ ಗಳಷ್ಟು ಕ್ಷೀರ ದೇಶದಲ್ಲಿ ಉತ್ಪಾದನೆಯಾಗಿದೆ.
ಜಾಗತಿಕ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಶೇ.23ರಷ್ಟು ಪಾಲು ಭಾರತದ್ದಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಹಾಲು ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದೆ. ಹಾಲಿನ ಉತ್ಪಾದನೆ 1950-51ರಲ್ಲಿ 17 ಮೆಟ್ರಿಕ್ ಟನ್‌ಗಳಿಂದ 2020-21ರಲ್ಲಿ 209.96 ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಹಾಲಿನ ಲಭ್ಯತೆ 1950-51ರಲ್ಲಿ130 ಗ್ರಾಂ ಇದ್ದು, 2020-2021ರಲ್ಲಿ 427ಗ್ರಾಂಗೆ ಹೆಚ್ಚಳವಾಗಿದೆ.
ಭಾರತ ವಾರ್ಷಿಕ 8.5 ಲಕ್ಷ ಕೋಟಿ ರೂ. ಮೌಲ್ಯದ ಹಾಲನ್ನು ಉತ್ಪಾದಿಸುತ್ತದೆ. ಹಾಲು ಉತ್ಪಾದಕರ ಒಕ್ಕೂಟಗಳು ಭಾರತದಲ್ಲಿ ಕ್ಷೀರ ಕ್ರಾಂತಿ ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗ್ರಾಮೀಣ ಭಾಗದ ಸಣ್ಣ ರೈತರಿಗೆ ಹೈನುಗಾರಿಕೆ ಇಂದು ಆದಾಯದ ಪ್ರಮುಖ ಮೂಲವಾಗಿದೆ ಕೂಡ.
ಮೀನು, ಮೊಟ್ಟೆ ಉತ್ಪಾದನೆಯಲ್ಲಿ ಕೂಡ ದೇಶದಲ್ಲಿ ಪ್ರಗತಿ ಕಂಡುಬಂದಿದೆ. 1950-51ರಲ್ಲಿ ದೇಶದಲ್ಲಿ 1832 ಮಿಲಿಯನ್ ಮೊಟ್ಟೆಗಳು ಉತ್ಪಾದನೆಯಾಗಿದೆ. 2019-20ರಲ್ಲಿ ಇದು 1,14,383 ಮಿಲಿಯನ್ ಗೆ ಏರಿಕೆಯಾಗಿದೆ. ಮೀನು ಉತ್ಪಾದನೆ ಕೂಡ 1950-51ರಲ್ಲಿ 752 ಸಾವಿರ ಟನ್ ಗಳಷ್ಟಿದ್ದು, 2019-20ರಲ್ಲಿ 14070 ಸಾವಿರ ಟನ್ ಗಳಿಗೆ ಏರಿಕೆಯಾಗಿದೆ.