ಶಿರಸಿ: ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡಿದ ಚಂದುಬಾಬು ಅವರ ಹೆಸರಿನಲ್ಲಿ ನೀಡಲಾಗುವ ದಿ.ಚಂದುಬಾಬು ಪ್ರಶಸ್ತಿ-2022ನ್ನು ಯಕ್ಷಗಾನ, ತಾಳಮದ್ದಲೆ, ಸಂಗೀತಗಳ ಹಳೆಯ ಕಾರ್ಯಕ್ರಮಗಳ ಧ್ವನಿ ಮುದ್ರಣ ಸಂಗ್ರಹಕಾರ ಶ್ರೀಕಾಂತ ಹೆಗಡೆ ಪೇಟೇಸರ ಅವರಿಗೆ ಪ್ರದಾನ ಮಾಡಲಾಯಿತು.
ನಗರದ ಟಿಎಂಎಸ್ ಸಭಾಂಗಣದಲ್ಲಿ ಶನಿವಾರ ಯಕ್ಷ ಸಂಭ್ರಮ ಟ್ರಸ್ಟ್ ಅವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಎಂಟು ದಿನಗಳ ಕಾಲ ಹಮ್ಮಿಕೊಂಡ ಶ್ರೀಕೃಷ್ಣಾಷ್ಟಕ ತಾಳಮದ್ದಲೆ ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಪೇಟೆಸರ ಅವರಿಗೆ ಚಂದುಬಾಬು ಪ್ರಶಸ್ತಿ ಪ್ರದಾನ ಮಾಡಲಾಯಿತು. ಐದು ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಕೊಟ್ಟು ಪುರಸ್ಕೃತರನ್ನು ಗೌರವಿಸಲಾಯಿತು.
ಶ್ರೀಕೃಷ್ಣಾಷ್ಟಕ ತಾಳಮದ್ದಲೆ ಸರಣಿಗೆ ಚಾಲನೆ ನೀಡಿದ ಕಲಾವಿದ ವಿನಯ ಹೆಗಡೆ ಗಡೀಕೈ ಮಾತನಾಡಿ, ಕಲೆಯ ಕೊನೆಯ ಉದ್ದೇಶ ಆನಂದವೇ ಆಗಿದೆ. ಯಕ್ಷಗಾನವ ತಾಳಮದ್ದಲೆ ಇವನ್ನು ಕೊಟ್ಟಿವೆ. ಸಂಗೀತ, ಸಾಹಿತ್ಯ ಒಟ್ಟೊಟ್ಟಿಗೆ ಇದು ಕೊಟ್ಟಿದೆ. ಕೇಳುತ್ತಲೇ ಕಲಾವಿದ ರೂಪಿಸುವ ತಾಕತ್ತಿದೆ ಈ ಕಲೆಗಳಿಗೆ ಇದೆ. ಚದುರಂಗದ ಆಟದಂತೆ ತಾಳಮದ್ದಲೆ ಕಾಣುತ್ತದೆ. ಕಲಾ ಸಂಘಟಕರು ದುರ್ಬಲ ಆದರೂ ದುರ್ಲಭ ಆದರೂ ಕಷ್ಟ ಎಂದರು.
ಸಮ್ಮಾನ ಸ್ವೀಕರಿಸಿದ ಶ್ರೀಕಾಂತ ಪೇಟೆಸರ, ಇದೊಂದು ಭಾಗ್ಯ ಎಂದು ಸ್ವೀಕರಿಸಿದ್ದೇನೆ ಎಂದರು. ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ ಮಾತನಾಡಿ, ವಿದ್ಯಾವಾಚಸ್ಪತಿ ಪದವಿ ಲಭಿಸಿದ್ದು, ತಂದೆ ತಾಯಿ ಹಾಗೂ ಕಲಿಸಿದ ಗುರುಗಳು ನೀಡದ ಕೊಡುಗೆಯ ಕಾರಣ ಎಂದರು. ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ತಾಳಮದ್ದಲೆ ಸಪ್ತಾಯ, ಯಕ್ಷಗಾನ, ಸಂಗೀತಗಳು ಇಲ್ಲಿ ನಡೆಯುವದರಿಂದ ಇದೊಂದು ಸಭಾಂಗಣ ಕಟ್ಟಿದ್ದು ಸಾರ್ಥಕ ಆಗಿದೆ ಎಂದರು.
ಅಧ್ಯಕ್ಷತೆಯನ್ನು ಟ್ರಸ್ಟನ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ವಹಿಸಿದ್ದರು. ಟ್ರಸ್ಟ ಕೋಶಾಧ್ಯಕ್ಷ ಸೀತಾರಾಮ ಚಂದು ಸ್ವಾಗತಿಸಿದರು. ಇಂದಿರಾ ಹೆಗಡೆ ಪ್ರಸ್ತಾವಿಕ ಮಾತನಾಡಿದರು. ಡಾ.ವಿಕಾಸರಾವ್ ಸನ್ಮಾನ ಪತ್ರ ವಾಚಿಸಿದರು. ವಿ.ಗಣಪತಿ ಭಟ್ಟ ಸಂಕದಗುAಡಿ ಅಭಿನಂದನಾ ನುಡಿಗಳನ್ನು ಆಡಿದರು. ಕಾರ್ಯದರ್ಶಿ ಬಾಲಚಂದ್ರ ಹೆಗಡೆ ಕೆಶಿನ್ಮನೆ ವಂದಿಸಿದರು. ರಾಘವೇಂದ್ರ ಬೆಟ್ಡಕೊಪ್ಪ ನಿರ್ವಹಿಸಿದರು. ವೇದಿಕೆಯಲ್ಲಿ ಸರಸ್ವತಿ ಹೆಗಡೆ ಪೇಟೆಸರ ಇದ್ದರು. ಬಳಿಕ ಕೃಷ್ಣಾವತರಣ ತಾಳಮದ್ದಲೆ ಪ್ರಸಿದ್ದ ಕಲಾವಿದರಿಂದ ನಡೆಯಿತು. ಆ.13 ತನಕ ಪ್ರತಿದಿನ ಸಂಜೆ 4 ತನಕ ನಡೆಯಲಿದ್ದು, 40ಕ್ಕೂ ಅಧಿಕನ ಕಲಾವಿದರು ಪಾಲ್ಗೊಳ್ಳಲಿದ್ದಾರೆ.