ಶಿರಸಿ: ತಾಲೂಕು ಪಂಚಾಯತ್ ಆವರಣದ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ್ ಹಿತ್ತಲಕೊಪ್ಪ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ನರೇಗಾ ಯೋಜನೆ, ವಸತಿ ಯೋಜನೆ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ, ಹಾಗೂ ಸ್ವಚ್ಛ ಭಾರತ್ ಯೋಜನೆ ಮತ್ತು ಜಿಪಿಡಿಪಿ 2022-23ನೇ ಸಾಲಿನ ಕ್ರಿಯಾ ಯೋಜನೆ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಪ್ರವಾಸಿ ಸ್ಥಳಗಳ ಕಸ ನಿರ್ವಹಣೆ ರೂಟ್ ಮ್ಯಾಪ್ ಹಾಗೂ ನೆರೆ ಸಂತ್ರಸ್ತರಿಗೆ ನೀಡಲಾಗುವ ಮನೆಗಳ ಪ್ರಗತಿ ಸೇರಿದಂತೆ ಹರ್ ಘರ್ ತಿರಂಗಾ ಮತ್ತು ಗ್ರಾಮೀಣ ಕ್ರೀಡಾಕೂಟದ ಕುರಿತು ನಿಗದಿತ ಅವಧಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ರಾಮಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಲೂಕು ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿ ಹಾಜರಿದ್ದರು.