ಕುಮಟಾ: ಹೊನ್ನಾವರದಿಂದ ವರ್ಗಾವಣೆಗೊಂಡು ಕುಮಟಾದ ಸಂತೇಗುಳಿ ಶಾಲೆಗೆ ಆಗಮಿಸಿದ ಶಿಕ್ಷಕರೋರ್ವರಿಗೆ ಅಲ್ಲಿಯ ಮುಖ್ಯಾಧ್ಯಾಪಕರು ಶಾಲೆಗೆ ಹಾಜರು ಪಡಿಸಿಕೊಳ್ಳದ ಘಟನೆ ಸಂಭವಿಸಿದೆ.
ಹೊನ್ನಾವರ ತಾಲೂಕಿನ ಉಪೋಣಿ ಸಿಆರ್‌ಪಿಯಾಗಿದ್ದ ಶಿಕ್ಷಕ ನಾಸೀರ್ ಖಾನ್ ಹಿಂದೊಮ್ಮೆ ಅಮಾನತ್‌ಗೊಂಡವರು, ಈಗ ಅವರನ್ನು ಕರ್ತವ್ಯಕ್ಕೆ ಪುನರ್ ನೇಮಕ ಮಾಡಿ ಕುಮಟಾ ತಾಲೂಕಿನ ಕೆಪಿಎಸ್ ಸಂತೇಗುಳಿಯ ಉರ್ದು ಪ್ರಾಥಮಿಕ ಶಾಲೆಗೆ ವರ್ಗಾಯಿಸಲಾಗಿತ್ತು. ಅಲ್ಲಿಯ ಮುಖ್ಯಾಧ್ಯಾಪಕ ಎಂ.ವಾಯ್.ಶೇಖ್, ಶಿಕ್ಷಕ ನಾಸೀರ್ ಖಾನ್‌ರನ್ನು ಹಾಜರುಪಡಿಸಿಕೊಳ್ಳಲು ಸುತಾರಾಂ ಒಪ್ಪದೇ ಅವರನ್ನು ವಾಪಸ್ಸು ಕಳುಹಿಸಿದ್ದಾರೆ.
ನಾಸೀರ್ ಖಾನ್ ಸಿ. ಆರ್. ಪಿಯಾಗಿದ್ದಾಗ ಅವರ ಮೇಲೆ ಬಂದಿರುವ ಆರೋಪದಿಂದಾಗಿ ಸೇವೆಯಿಂದ ಅಮಾನತ್ ಮಾಡಲಾಗಿತ್ತು.1 ತಿಂಗಳು 19 ದಿನಗಳು ಕಳೆದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತ್ ನ್ನು ತೆರವುಗೊಳಿಸಿದೆ. ಖಾಲಿ ಇರುವ ಸಂತೇಗುಳಿ ಉರ್ದು ಹಿ. ಪ್ರಾ.ಶಾಲೆಗೆ ವರ್ಗಾಯಿಸಲಾಗಿದೆ.
ಶಿಕ್ಷಕ ನಾಸೀರ್ ಖಾನ್ ಶಾಲೆಗೆ ಹಾಜರಾಗಲು ಆಗಮಿಸಿದಾಗ, “ನಿಮ್ಮನ್ನು ನಾನು ಹಾಜರುಪಡಿಸಿಕೊಳ್ಳುವುದಿಲ್ಲ. ಎಸ್.ಡಿ.ಎಂ.ಸಿ ಅವರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಮುಖ್ಯಾಧ್ಯಾಪಕ ಎಂ. ವಾಯ್, ಶೇಖ್ ಶಿಕ್ಷಕ ನಾಸೀರ್ ಖಾನ್‌ರನ್ನು ಹಾಜರುಪಡಿಸಿಕೊಳ್ಳದೆ ತಿರಸ್ಕರಿಸಿದ್ದಾರೆ. ಡಿಡಿಪಿಐ ಈಶ್ವರ ನಾಯ್ಕ ಇವರನ್ನು ಸಂತೇಗುಳಿಯ ಈ ಶಾಲೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದು, ಇಲ್ಲಿಯ ಮುಖ್ಯಾಧ್ಯಾಪಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಮೊರೆ ಹೋದ ಶಿಕ್ಷಕ ಕುಟುಂಬ: ಕಳೆದ 1 ತಿಂಗಳು 19 ದಿನಗಳು ಈಗಾಗಲೇ ಕೆಲಸವಿಲ್ಲದೇ ಕಳೆದಿದ್ದೇವೆ. ಮುಂದೆಯೂ ಹೀಗೆ ಆದರೆ ನಮಗೆ ಜೀವನವನ್ನು ನಡೆಸುವುದೇ ಕಷ್ಟವಾಗಿದೆ. ನನ್ನ ಮೇಲೆ ಕುಟುಂಬದ ಪೂರ್ಣ ಜವಾಬ್ದಾರಿಯಿದ್ದು, ಸರಕಾರ ನೀಡಿದ ಆದೇಶವನ್ನು ಪಾಲಿಸದ ಮುಖ್ಯಾಧ್ಯಾಪಕರಿಗೆ ಶಿಕ್ಷೆಯಾಗಬೇಕೆಂದು ನಾಸೀರ್ ಖಾನ್ ತಮ್ಮ ಕುಟುಂಬದೊಂದಿಗೆ ಆಗಮಿಸಿ ಪೋಲಿಸರಿಗೆ ದೂರು ನೀಡಿದ್ದಾರೆ. ಉಪ್ಪೋಣಿ ಸಿ. ಆರ್. ಪಿ ಆಗಿದ್ದಾಗ ನನ್ನ ಮೇಲೆ ಆರೋಪ ಹೊರಿಸಿ ಅಮಾನತ್ ಆಗುವಂತೆ ಮಾಡಲಾಗಿದೆ. ಈ ಬಗ್ಗೆ ನನ್ನಲ್ಲಿ ಎಲ್ಲ ದಾಖಲೆಗಳಿದ್ದು, ಆ ತನಿಖೆಯನ್ನು ನ್ಯಾಯಯುತವಾಗಿ ಎದುರಿಸಲು ಸಿದ್ಧನಿದ್ದೇನೆ, ಅಮಾನತ್ ತೆರವುಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯು ನನಗೆ ಸಂತೆಗುಳಿಯ ಹಿ.ಪ್ರಾ ಶಾಲೆಗೆ ವರ್ಗಾಯಿಸಿತ್ತು. ಆದರೆ ಅಲ್ಲಿಯ ಮುಖ್ಯಾಧ್ಯಾಪಕರು, ಸರಕಾರದ ಆದೇಶವನ್ನು ಪಾಲಿಸದೇ, ನನಗೆ ತುಂಬಾ ಹಾಗೂ ಅನ್ಯಾಯ ಮಾಡಿದ್ದಾರೆ ಎಂದು ಪೋಲಿಸ್‌ರಿಗೆ ದೂರಿದ್ದಾರೆ.